

ಹಳಿಯಾಳ: ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ಬರಬೇಕು. ಒಳ್ಳೆಯ ಜನಪ್ರತಿನಿಧಿಯಾಗಿ ಜನರ ಸೇವೆ ಮಾಡಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.
ಪಟ್ಟಣದ ಪುರಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಂದಾಯ ಇಲಾಖೆಯ ಮೂಲಕ ಹೊಸದಾಗಿ ರಚಿಸಿದ ಕಂದಾಯ ಗ್ರಾಮಗಳ ಕುಟುಂಬಗಳಿಗೆ ಡಿಜಿಟಲ್ ಹಕ್ಕುಪತ್ರ ವಿತರಣೆ, ರಸಗೊಬ್ಬರಗಳ ಬಳಕೆ ಕುರಿತು ಕೃಷಿ ಇಲಾಖೆಯಿಂದ ಹಸ್ತಪ್ರತಿ ಬಿಡುಗಡೆ ಮಾಡಿ ಆಯ್ದ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ದನಕರುಗಳ ಆಹಾರ ಬೀಜ ಹಾಗೂ ಮೀನು ಹಿಡಿಯುವ ಸಲಕರಣೆ ವಿತರಿಸಿ ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ಹಂಚುವ ಹಕ್ಕು ಅಧಿಕಾರಿಗಳಿಗಿಲ್ಲ. ಯೋಜನೆಗಳನ್ನು ಫಲಾನುವಿಗಳಿಗೆ ಹಂಚುವ ಕೆಲಸ ಜನಪ್ರತಿನಿಧಿಗಳದ್ದು, ಇದರಲ್ಲಿ ಅಧಿಕಾರಿಗಳು ಹಸ್ತಕ್ಷೇಪ ಮಾಡಬಾರದು ಎಂದು ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಚವ್ವಾಣ, ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ ತಾಲೂಕಾಡಳಿತದ ಅಧಿಕಾರಿಗಳು ಇದ್ದರು.