

ಮಡಿಕೇರಿ: ಕೊಡವ ಯುವ ಜನಾಂಗವನ್ನು ಸಂಸ್ಕೃತಿ, ಸಾಹಿತ್ಯದತ್ತ ಆಕರ್ಷಿಸಬೇಕು ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರ ಶಾಸಕರಾದ ಡಾ.ಮಂತರ್‌ಗೌಡ ಹೇಳಿದರು.
ಅರೆಕಾಡುವಿನ ರಿಯಾವರ್ ರೆಸಾರ್ಟ್ಸ್‌ನಲ್ಲಿ ನಡೆದ ಅಕಾಡೆಮಿಯ ವಿನೂತನ ಕಾರ್ಯಕ್ರಮ ನಾಡೊರ್ಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಭಿನ್ನವಾದ ಸಂಸ್ಕೃತಿಯುಳ್ಳ ಜನಾಂಗ ಕೊಡವರಾಗಿದ್ದು, ಈ ಸಂಸ್ಕೃತಿ ಹಾಗೂ ಭಾಷೆಯನ್ನು ಉಳಿಸಿಕೊಂಡು ಹೋಗುವ ಹಾಗೂ ಮುಂದಿನ ಪೀಳಿಗೆಯಲ್ಲಿ ಅಭಿಮಾನ ಹುಟ್ಟಿಸುವ ಕೆಲಸ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಇಂದಿನ ಅಧ್ಯಕ್ಷರಿಂದ ಆಗಬೇಕಿದೆ. ಕೊಡವ ಸಾಂಸ್ಕೃತಿಕ ಹಬ್ಬವನ್ನು ಆಚರಿಸುವುದರೊಂದಿಗೆ ಆಯಾಯ ಊರು-ನಾಡಿನ ಯುವ ಜನಾಂಗದ ಪಾಲ್ಗೊಳ್ಳುವಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಆಗಬೇಕಿದೆ. ಹೊರಗೆ ನೆಲೆಸಿರುವ ಯುವಕರನ್ನು ಕೊಡಗಿನಲ್ಲಿಯೇ ನೆಲೆಸುವಂತೆ ಮಾಡಬೇಕು. ಕೊಡವ ಅಕಾಡೆಮಿಯ ಕೆಲಸ-ಕಾರ್ಯಗಳಿಗೆ ಉತ್ತೇಜನ ನೀಡುವ ಸಲುವಾಗಿ ನಾನು ವೈಯಕ್ತಿಕವಾಗಿ ಹಾಗೂ ಸರ್ಕಾರದ ಮಟ್ಟದಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ವೆಂಕಟ ರಾಜಾ ಮಾತನಾಡಿ, ಅಕಾಡೆಮಿಯ ಕಾರ್ಯಕ್ರಮಗಳು ಜೀವಂತವಾಗಿರಬೇಕು. ಕೊಡವ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮಗಳು ಜನಾಂಗದ ಸಂಸ್ಕೃತಿ ಹಾಗೂ ಬಾಷೆಗೆ ಹೊಂದಿಕೊಂಡಂತೆ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯ. ಕೊಡವ ಅಕಾಡೆಮಿಯ ಇಂತಹ ಪ್ರತಿಯೊಂದೂ ಕಾರ್ಯಕ್ರಮ ಆಧುನಿಕ ತಂತ್ರಜ್ಞಾನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ಹಾಗಿದ್ದಲ್ಲಿ ಮಾತ್ರ ಮುಂದಿನ ಸಾವಿರಾರು ವರ್ಷಗಳು ಕಳೆದರೂ ಅವುಗಳನ್ನು ನೋಡಿ ಆನಂದಿಸಲು ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡವ ಆಚಾರ ವಿಚಾರ, ಸಂಸ್ಕೃತಿ ದೇಶದಲ್ಲೇ ಅಗ್ಯಸ್ಥಾನದಲ್ಲಿ ನಿಲ್ಲುವಂತದ್ದು. ಇಂತಹ ಹಿರಿಮೆಯುಳ್ಳ ಸಂಸ್ಕೃತಿಯನ್ನು ಕೊಡವ ಜನಾಂಗ ಉಳಿಕೊಂಡು ಬೆಳೆಸಿಕೊಂಡು ಹೋಗಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ. ಕೊಡಗಿನಲ್ಲಿ ಆಸ್ತಿ-ಪಾಸ್ತಿಯನ್ನು ಉಳಿಸಿಕೊಂಡು ಹೋದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ಇರುವ ಭೂಮಿ-ತೋಟಗಳನ್ನು ಪರಿವರ್ತಿಸಿ ನಿವೇಶನ ಮಾಡುವಂತದ್ದು ತಪ್ಪಬೇಕು. ನಮ್ಮ ಭೂಮಿ-ಆಸ್ತಿ ಎಂದಿಗೂ ನಮ್ಮ ಒಡೆತನದಲ್ಲಿಯೇ ಇರುವಂತಾಗಬೇಕು. ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಇವೆಲ್ಲ ಪೂರಕವಾಗಿದ್ದು ಗದ್ದೆಯನ್ನು ನೆಡುವ ಕೆಲಸ ಮುಂದಿನ ದಿನಗಳಲ್ಲಿ ಸರ್ಕಾರದ ಸಬ್ಸಿಡಿಯೊಂದಿಗೆ ಆಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ಕೊಡವ ಸಂಸ್ಕೃತಿಯು ಈ ನೆಲದ ಅಸ್ಮಿತೆಯಾಗಿದ್ದು ಪ್ರಪಂಚದೆಲ್ಲೆಡೆ ಕೊಡವ ಸಂಸ್ಕೃತಿ-ಸಾಹಿತ್ಯದ ಕಂಪು ಪಸರಿಸುವ ಕೆಲಸವಾಗಬೇಕಿದೆ. ನಮ್ಮ ಭಾಷೆ, ಸಂಸ್ಕೃತಿ ಹಾಗೂ ನೆಲದ ಮೇಲಿನ ಅಭಿಮಾನ-ಹಕ್ಕನ್ನು ಪುನರ್‌ಸ್ಥಾಪಿಸುವುದರ ಮೂಲಕ ಸಂಸ್ಕೃತಿಯ ವೈಭವ ಮರುಕಳುಹಿಸುವಂತಾಗಬೇಕೆಂದು ಹೇಳಿದರು.
ಹಿರಿಯರು ಪಾಲಿಸಿ-ಪೋಶಿಸಿಕೊಂಡು ಬಂದಿರುವ ಕೊಡವ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾರ್ಯ ನಮ್ಮಿಂದಾಗಬೇಕು. ನಾಡೊರ್ಮೆಯ ಉದ್ದೇಶವೇ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟಿತವಾದ ಕೊಡವೋಲೆ ತ್ರೈಮಾಸಿಕ ಸಂಚಿಕೆಯನ್ನು ಜಿಲ್ಲಾಧಿಕಾರಿ ವೆಂಕಟರಾಜಾ ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಅರೆಕಾಡು-ಹೊಸ್ಕೇರಿ ಗ್ರಾಮಸ್ಥರಾದ ತೊಂಡಿಯಂಡ ವಾಸು ನಾಣಯ್ಯ, ಬಲ್ಲಚಂಡ ಶಂಭು ಸೋಮಯ್ಯ, ಅಣ್ಣಾರ್‌ಕಂಡ ಪ್ರೇಮ್ ಅಯ್ಯಪ್ಪ, ಕಾಡುಮಂಡ ವಿನೋದ್ ತಿಮ್ಮಯ್ಯ, ಬಲ್ಲಾರಂಡ ಅಭಿನ್ ಮುತ್ತಣ್ಣ ಹಾಗೂ ರಿಯಾವರ್ ರೆಸಾರ್ಟ್ ಮಾಲಿಕರಾದ ಮುಕ್ಕಾಟಿರ ವಿನಯ್-ಶಿಲ್ಪ ದಂಪತಿಯರನ್ನು ಮತ್ತು ಕೊಡವ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯರನ್ನು ಸನ್ಮಾನಿಸಲಾಯಿತು.
ಡಾ.ಮುಲ್ಲೇಂಗಡ ರೇವತಿ ಪೂವಯ್ಯರಿಂದ ಕೊಡವಡ ಮಾಲ್-ಮಟ ಚಿಂಗಾರ ವಿಷಯವಾಗಿ ವಿಚಾರ ಮಂಡಿಸಿದರು. ನಾಡೊರ್ಮೆಯಲ್ಲಿ ಮೈಸೂರಿನ ಪಡಿಪು ಕಯ್ಯಲೆ ತಂಡದ ಕುಲ್ಲಚಂಡ ವಿನುತ ಕೇಸರಿ ಮುಂದಾಳತ್ದದ ತಂಡದವರಿಂದ ಉಮ್ಮತಾಟ್, ಸ್ವಾಗತ ನೃತ್ಯ, ಕೊಡವ ನೃತ್ಯಗಳ ಪ್ರದರ್ಶನವನ್ನು ಏರ್ಪಡಿಲಾಗಿತ್ತು. ಬೆಕ್ಕೆಸೊಡ್ಲೂರಿನ ಶ್ರೀ ಮಂದತವ್ವ ಕೊಡವ ಸಾಂಸ್ಕೃತಿಕ ಸಂಘದ ಮಲ್ಲಮಡ ಶಾಮಲ ತಂಡದವರಿಂದ ಗೆಜ್ಜೆತಂಡ್ ನೃತ್ಯ ಎಲ್ಲರ ಮನಸೂರೆಗೊಂಡವು. ಕೊಡವ ಹಾಡುಗಾರ ಮಾಳೇಟಿರ ಅಜಿತ್ ಪೂವಣ್ಣರಿಂದ ಕೊಡವ ಹಾಡುಗಳು ಪ್ರತಿಯೊಬ್ಬರಲ್ಲಿ ಮಂದಹಾಸ ಮೂಡಿಸಿದವು. ಮಡಿಕೇರಿ ಕೊಡವ ಕಲಾತಂಡದವರಿಂದ ಅಕಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ ಮುಂದಾಳತ್ವದಲ್ಲಿ ಬಾಳೋಪಾಟ್, ಬೊಳಕಾಟ್ ಕಾರ್ಯಕ್ರಮಗಳು ನಡೆದವು. ಮೈಸೂರಿನ ಕೊಡವ ಜಾನಪದ ತಜ್ಞ ಡಾ. ಚೇನಂಡ ರಘು ಉತ್ತಪ್ಪರಿಂದ ದುಡಿಕೊಟ್ಟ್ ದೇಶಕೆಟ್ಟ್ ಪಾಟ್ ಉತ್ತಮವಾಗಿ ಮೂಡಿಬಂತು.
ಕೊಡಗು ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಯೋಜನೆ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಎಲ್ಲಾ ಸದಸ್ಯರು, ಕೊಡವ ವೆಲ್ಫೇರ್ ಅಸೋಸಿಯೇಶನ್‌ನ ಎಲ್ಲಾ ಪದಾಧಿಕಾರಿಗಳು, ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.