

ವಿಜಯವಾಣಿ ಸುದ್ದಿಜಾಲ ಧಾರವಾಡ
ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಉದ್ಯೋಗ ನಡೆಸುತ್ತಿರುವವರಿಗೆ ಕೌಶಲ ಭರಿತ ಯುವಕರ ಅಗತ್ಯವಿದೆ. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ವೃತ್ತಿಪರ ಕೌಶಲಗಳನ್ನೂ ಬೆಳೆಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಎಸ್ಡಿಎಂ ತಾಂತ್ರಿಕ ಕಾಲೇಜಿನಲ್ಲಿ ಭಾರತೀಯ ಅಂಚೆ ಇಲಾಖೆ ಹಾಗೂ ಕೇಂದ್ರ ಸರ್ಕಾರದ ವತಿಯಿಂದ ರೋಜಗಾರ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರಲ್ಲಿ ಕೌಶಲ ಹೆಚ್ಚಿಸುವ ನಿಟ್ಟಿನಲ್ಲಿ ಕೈಗಾರಿಕಾ ತರಬೇತಿ ಕೇಂದ್ರಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ಎಲ್ಲ ಹಂತದ ಉದ್ಯೋಗ ಸೃಷ್ಟಿಗೆ ಸರ್ಕಾರ ಸತತ ಪ್ರಯತ್ನ ಮಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಆರ್ಥಿಕವಾಗಿ ಸಹ ಸುಧಾರಣೆ ಕಂಡಿದ್ದು, ಜಗತ್ತಿನಲ್ಲೇ ಟಾಪ್ 5ನಲ್ಲಿದೆ ಎಂದರು.
ದೇಶದಲ್ಲಿನ ಎಲ್ಲ ಜನರಿಗೂ ಸರ್ಕಾರಿ ನೌಕರಿ ಸಿಗುವುದು ಕಷ್ಟಸಾಧ್ಯ. ಯುವಕರು ಸರ್ಕಾರಿ ನೌಕರಿ ಎಂದೇ ಕುಳಿತುಕೊಳ್ಳುವ ಬದಲು ಉದ್ಯೋಗ ಸೃಷ್ಟಿಸಲು ಸಹ ಪ್ರಯತ್ನ ಮಾಡಬೇಕು. ಉತ್ತಮ ಉದ್ಯಮಗಳನ್ನು ಆರಂಭಿಸಲು ಭಾರತ ಸೇರಿ ಇತರ ದೇಶಗಳಲ್ಲೂ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಉದ್ಯಮ ಸ್ಥಾಪಿಸಬೇಕು ಎಂದರು.
ಮಕ್ಕಳು ಉದ್ಯಮ ಆರಂಭಕ್ಕೆ ನಿರ್ಧರಿಸಿದರೆ ಪಾಲಕರು ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡುವ ಮೂಲಕ ಅವರಿಗೆ ಪ್ರೋತ್ಸಾಹಿಸಬೇಕು. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ವಿಶ್ವಾಸದಿಂದ ಮುನ್ನುಗ್ಗಬೇಕು ಎಂದರು.
ಇಂದಿನ ಸಮಾರಂಭದಲ್ಲಿ ದೇಶಾದ್ಯಂತ 51 ಸಾವಿರಕ್ಕೂ ಹೆಚ್ಚು ಹಾಗೂ ಜಿಲ್ಲೆಯಲ್ಲಿನ 100 ಅಭ್ಯರ್ಥಿಗಳಿಗೆ ನೇಮಕಾತಿಪತ್ರ ವಿತರಿಸಲಾಗಿದೆ. ವಿವಿಧ ಇಲಾಖೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ನೇಮಕಾತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಈ ಯೋಜನೆ ಆರಂಭಿಸಲಾಗಿದೆ. ನೇಮಕಾತಿಪತ್ರ ಪಡೆದ ಎಲ್ಲರಿಗೂ ಅಭಿನಂದನೆಗಳು. ಉತ್ತಮ ಸೇವೆ ಮಾಡುವ ಮೂಲಕ ವಿಕಸಿತ ಭಾರತಕ್ಕೆ ಕೈ ಜೋಡಿಸಲಿ ಎಂದರು.
ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ ಜನರಲ್ ಸುಶೀಲಕುಮಾರ, ಪೋಸ್ಟಲ್ ಸರ್ವಿಸ್ ನಿರ್ದೇಶಕಿ ವಿ.ತಾರಾ, ಎಸ್ಡಿಎಂ ಸಿಇಟಿ ಕಾರ್ಯದರ್ಶಿ ಜೀವಂದರಕುಮಾರ, ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ, ಶಂಕರ ಶೇಳಕೆ, ವಿಜಯಾನಂದ ಶೆಟ್ಟಿ, ಚಂದ್ರಶೇಖರ ಮನಗುಂಡಿ, ಇತರರು ಇದ್ದರು.