

ಬಳ್ಳಾರಿ : ಹಂಪಿಯಲ್ಲಿ ರಾಜ್ಯಮಟ್ಟದ ಯುವಜನ ಸೇವಾ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು ಎಂದು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.
ನಗರದ ಡಾ.ರಾಜ್‌ಕುಮಾರ್ ರಸ್ತೆಯ ಬಿಡಿಎಎ ಫುಟ್‌ಬಾಲ್ ಮೈದಾನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಸಂಘಗಳ ಒಕ್ಕೂಟ, ವಿವೇಕಾನಂದ ಯುವಕ ಸಂಘ ಹಾಗೂ ಸ್ಥಳೀಯ ಯುವಕ ಸಂಘಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವ-2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಬಲೀಕರಣ ಇಲಾಖೆಯಿಂದ ಯುವಜನರನ್ನು ಪ್ರೋತ್ಸಾಹಿಸಲು ಮತ್ತು ಅವರ ಅಧಿವೃದ್ಧಿಗಾಗಿ ರಾಜ್ಯಮಟ್ಟದ ಯುವಜನ ಸೇವಾ ತರಬೇತಿ ಕೇಂದ್ರ ಸ್ಥಾಪನೆಗೆ ಬೇಕಾದ 20 ಎಕರೆ ಜಾಗವನ್ನು ಹಂಪಿ ಅಥವಾ ಬಳ್ಳಾರಿ ಭಾಗದಲ್ಲಿ ಗುರುತಿಸಲಾಗುವುದು. ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲು ಇಚ್ಛಾಶಕ್ತಿ ಇದೆ ಎಂದು ಅವರು ನುಡಿದರು.
ಕಲಿಕೆ ಒಂದೇ ಮಾರ್ಗವಲ್ಲ, ಬದಲಾಗಿ ಅನೇಕ ರಂಗಗಳಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಮುನ್ನಡೆಯಬೇಕು. ಪ್ರತಿಯೊಬ್ಬ ಯುವಕ-ಯುವತಿಯರಲ್ಲಿ ವಿಭಿನ್ನ ಹಾಗೂ ವಿಶಿಷ್ಟವಾದ ಪ್ರತಿಭೆಯನ್ನು ಹೊಂದಿರುತ್ತಾರೆ. ಸಂಕಲ್ಪ ಇಟ್ಟುಕೊಂಡು ಗುರಿ ತಲುಪಿದರೆ, ಯಶಸ್ಸು ನಿಮ್ಮದಾಗುತ್ತದೆ ಎಂದರು.
ಕುಟುಂಬ ಹಿನ್ನೆಲೆಯಲ್ಲಿ ಅನೇಕ ಸಮಸ್ಯೆಗಳಿದ್ದರೂ, ಯುವಜನ ತಮ್ಮ ಗುರಿಯನ್ನು ತಲುಪಲು ಛಲ ಬಿಡದೆ, ತಮ್ಮ ಕನಸುಗಳನ್ನು ಕಟ್ಟಿಕೊಳ್ಳುವ ಕೆಲಸ ಮಾಡಬೇಕು. ಯುವಕರಲ್ಲಿ ಮುಖ್ಯವಾಗಿ ಒಳ್ಳೆಯ ಗುಣ ಮತ್ತು ಸಂಸ್ಕೃತಿ ಅಳವಡಿಸಿಕೊಂಡಾಗ ಮಾತ್ರ ಎಲ್ಲವನ್ನೂ ಪಡೆಯಲು ಸಾಧ್ಯ ಎಂದು ವಿಶ್ವಾಸ ಮೂಡಿಸಿದರು.
18 ವರ್ಷ ತುಂಬಿದರೆ ಯುವಕ ಯುವತಿಯರಿಗೆ ಮತ ಚಲಾಯಿಸುವ ಹಕ್ಕು ಬರುತ್ತದೆ. ಇದರಿಂದ ಉತ್ತಮ ನಾಯಕರನ್ನು ಆರಿಸುವ ಚಿಂತನೆ ಮೂಡುತ್ತದೆ. ಅದೇ ರೀತಿಯಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ 371- ಜೆ ಅಡಿಯಲ್ಲಿ ಯುವಕ ಯುವತಿಯರು ಸರ್ಕಾರದ ಸೌಲಭ್ಯ ಪಡೆದುಕೊಂಡು ಶೈಕ್ಷಣಿಕವಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಪಾಲಕರ ವಿಶ್ವಾಸಕ್ಕೆ ಅಗೌರವ ತರಬಾರದು. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವು ಮೊಬೈಲ್ ಗೀಳಿನಲ್ಲಿ ಬೀಳಬಾರದು. ಅದರಿಂದ ಒಳಿತಾಗುವ ಉಪಯುಕ್ತ ಮಾಹಿತಿಯನ್ನು ಮಾತ್ರ ಬಳಸಿಕೊಳ್ಳಬೇಕು. ಯುವಕರು ಜೀವನದಲ್ಲಿ ಒಳ್ಳೆಯ ದಾರಿಯನ್ನು ಆಯ್ದುಕೊಳ್ಳಬೇಕು ಎಂದು ಎಚ್ಚರಿಸಿದರು.
ಯುವ ಸಮುದಾಯವು ಮುಖ್ಯವಾಗಿ ಮಾದಕ ವಸ್ತುಗಳಿಂದ ದೂರವಿರಬೇಕು. ಬೀಡಿ ಸಿಗರೇಟ್ ಸೇವನೆ ನಿರ್ಬಂಧ ಹಾಗೂ ಶಾಲೆ ಕಾಲೇಜುಗಳ ಸುತ್ತಮುತ್ತ ಮಾರಾಟ ಮತ್ತು ನಿಷೇಧದ ಕುರಿತು ಚರ್ಚಿಸಲಾಗಿದೆ ಎಂದು ವಿವರಿಸಿದರು.
ಯುವಕರು, ತಮ್ಮಲ್ಲಿನ ಕಲೆ ಮತ್ತು ಪ್ರತಿಭೆಗಳನ್ನು ಅನಾವರಣಗೊಳಿಸಲು ಯುವಜನೋತ್ಸವದಂತಹ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ಯುವಕ-ಯುವತಿಯರು ಅವುಗಳನ್ನು ಬಳಸಿಕೊಂಡು ತಮ್ಮ ಕಲೆಗಳ ಪ್ರದರ್ಶನ ನೀಡಬೇಕು ಎಂದು ನೀಡಿದರು.
ನಂತರದಲ್ಲಿ ವಿವಿಧ ಶಾಲಾ - ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ಕಥೆ ಬರೆಯುವುದು, ಪೋಸ್ಟರ್ ಮೇಕಿಂಗ್, ಘೋಷಣೆ, ಛಾಯಾಗ್ರಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕ್ರಮವಾಗಿ ಬಹುಮಾನ ವಿತರಿಸಲಾಯಿತು.
ಪಾಲಿಕೆ ಉಪ ಮೇಯರ್ ಬಿ.ಜಾನಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ, ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.