

ಅರಕಲಗೂಡು: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಜನ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಯುವ ಸ್ಪಂದನ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಯುವ ಸ್ಪಂದನ ಕಾರ್ಯಕ್ರಮದ ಉದ್ದೇಶ, ಯುವ ಸಬಲೀಕರಣದ ಮಹತ್ವ, ಆರೋಗ್ಯ, ಜೀವನಶೈಲಿ, ಲೈಂಗಿಕತೆ, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು, ಭಾವನೆಗಳ ನಿಭಾಯಿಸುವಿಕೆ, ನೆನಪಿನ ಶಕ್ತಿ, ಏಕಾಗ್ರತೆ, ಶಿಕ್ಷಣದ ಒತ್ತಡದ ನಿಭಾಯಿಸುವಿಕೆ ಮುಂತಾದ ವಿಷಯಗಳ ಕುರಿತು ಜಿಲ್ಲಾ ಯುವ ಪರಿವರ್ತಕ ಜಿ.ಎಲ್.ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಯುವ ಸ್ಪಂದನ ಕೇಂದ್ರ ಯುವಜನ ಸಂಬಂಧಿ ವಿಷಯಗಳ ಮಾರ್ಗದರ್ಶನ ಕೇಂದ್ರವಾಗಿದೆ. ಇಲ್ಲಿ ಯಾವುದೇ ವಯೋಮಾನದವರು ಯುವಜನ ಸಂಬಂಧಿ ತೊಂದರೆಗಳಿಗಾಗಿ ಯುವ ಸ್ಪಂದನ ಕೇಂದ್ರವನ್ನು ಸಂಪರ್ಕಿಸಬಹುದು ಎಂದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕ ಪರಶುರಾಮ್ ಶಿರೂರ್ ರಕ್ತದಾನದ ಮಹತ್ವ ಮತ್ತು ಅದರ ಉಪಯೋಗಗಳ ಕುರಿತು ಮಾಹಿತಿ ನೀಡಿದರು. ಪ್ರಾಂಶುಪಾಲೆ ಟಿ.ಪದ್ಮಾ ಹಾಗೂ ಉಪನ್ಯಾಸಕರು ಹಾಜರಿದ್ದರು.