

ವಿಜಯವಾಣಿ ಸುದ್ದಿಜಾಲ ಧಾರವಾಡ
ಅತ್ಯಾಚಾರ, ಕೊಲೆಗಳಿಗೆ ಮಾನವ ಮೌಲ್ಯಗಳ ಕುಸಿತ ಕಾರಣವಾಗಿದೆ ಎಂದು ಕರ್ನಾಟಕದ ಮಾಜಿ ಲೋಕಾಯುಕ್ತ ಹಾಗೂ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದರು.
ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಒ) ವತಿಯಿಂದ ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಆಯೋಜಿಸಿದ್ದ `ಮಹಿಳೆಯರ ಘನತೆ ಮತ್ತು ಮಾನವ ಮೌಲ್ಯ ಉಳಿಸೋಣ' ವಲಯ ಮಟ್ಟದ ಯುವಜನರ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ದೆಹಲಿಯಲ್ಲಿ ನಡೆದ ನಿರ್ಭಯ ಘಟನೆಯ ಸಂದರ್ಭದಲ್ಲಿ ದೇಶ ಎಚ್ಚೆತ್ತುಕೊಂಡು ಪ್ರತಿಭಟಿಸಿತ್ತು. ಅದೇರೀತಿ ಇಂದು ಕೂಡ ಆಗಬೇಕಾಗಿದೆ. ಮಾದಕ ವಸ್ತುಗಳ ಹಾವಳಿ ಸಮಾಜದಲ್ಲಿ ಹೆಚ್ಚಾಗುತ್ತಿದ್ದು, ಅದರ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಹಿಂದೆ ತಪ್ಪು ಮಾಡಿ ಜೈಲು ಶಿಕ್ಷೆ ಅನುಭವಿಸಿ ಬಂದವರನ್ನು ಸಮಾಜ ಬಹಿಷ್ಕರಿಸುತ್ತಿತ್ತು. ಅದೇ ಅವರಿಗೆ ಆಗುತ್ತಿದ್ದ ಸಾಮಾಜಿಕ ಶಿಕ್ಷೆ. ಆದರೆ, ಅವರನ್ನು ಇಂದು ಸನ್ಮಾನಿಸುವ ಸ್ಥಿತಿಗೆ ಸಮಾಜ ತಲುಪಿರುವುದು ಖೇದಕರ ಎಂದರು.
ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು. ಕೋರ್ಟ್ಗಳಲ್ಲಿ ವಿಚಾರಣೆ ನಡೆದು ಶಿಕ್ಷೆಯಾಗಲು ಬಹಳ ಸಮಯ ತೆಗೆದುಕೊಳ್ಳುತ್ತಿದೆ. ಕೆಲ ಪ್ರಕರಣಗಳಲ್ಲಿ ತೀರ್ಪು ಹೊರಬರುವಷ್ಟರಲ್ಲಿ ಆರೋಪಿ ಸತ್ತು ಹೋಗಿರುತ್ತಾನೆ. ಇದರಿಂದ ಅಪರಾಧ ಮಾಡುವವರಿಗೆ ಭಯ ಇಲ್ಲದಾಗಿದೆ. ಹಿರಿಯರು ಕಟ್ಟಿ ಬೆಳೆಸಿದ ಮಾನವ ಮËಲ್ಯಗಳನ್ನು ಯುವಕರು ಅಳವಡಿಸಿಕೊಂಡು ಅಪರಾಧಗಳಿಲ್ಲದ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಎಐಡಿವೈಒ ಅಖಿಲ ಭಾರತ ಉಪಾಧ್ಯಕ್ಷ ಡಾ. ಜಿ. ಶಶಿಕುಮಾರ್ ಮಾತನಾಡಿ, ಹುಬ್ಬಳ್ಳಿಯ ನೇಹಾ, ಅಂಜಲಿ ಕೊಲೆ, ಕೊಲ್ಕತ್ತದ ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ, ಕೊಲೆ ಘಟನೆಗಳಿಗೆ ನಿರುದ್ಯೋಗ ಪ್ರಮುಖ ಕಾರಣ. ಮಹಿಳೆಯರ ಅತ್ಯಾಚಾರ ಘಟನೆಗಳ ವಿರುದ್ಧ ತುರ್ತು ಕ್ರಮ ಕೈಗೊಳ್ಳಲು ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳನ್ನು ನಿರ್ಮಿಸಲು ವರ್ಮಾ ಸಮಿತಿ ಮಾಡಿದ ಶಿಫಾರಸುಗಳನ್ನು ಯಾವ ಸರ್ಕಾರಗಳೂ ಜಾರಿ ಮಾಡಲಿಲ್ಲ. ಪರಿಣಾಮ ನಿತ್ಯ ಅಂತಹ ಘಟನೆಗಳು ನಡೆಯುತ್ತಿವೆ. ಇವುಗಳನ್ನು ತಡೆಗೆ ಮಾದಕ ವಸ್ತುಗಳು, ಅಶ್ಲೀಲ ಸಿನಿಮಾಗಳ ವಿರುದ್ಧ ಧ್ವನಿ ಗಟ್ಟಿಗೊಳ್ಳಬೇಕು ಎಂದರು.
ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಮನೋಚಿಕಿತ್ಸಕ ನಡಹಳ್ಳಿ ವಸಂತ್, ಮನೋವೈದ್ಯೆ ಡಾ. ಸುಜ್ಞಾನಿದೇವಿ ಪಾಟೀಲ, ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರ ರಾಮಾ0ಜನಪ್ಪ ಅಲ್ದಳ್ಳಿ, ಇತರರಿದ್ದರು.