

ಮೈಸೂರು: ವ್ಯಕ್ತಿತ್ವ ವಿಕಸನ ಹಾಗೂ ಜ್ಞಾನ ವೃದ್ಧಿಗೆ ಕಲೆ, ಸಾಹಿತ್ಯ ಸಹಕಾರಿಯಾಗಿದೆ ಎಂದು ಸಾಹಿತಿ ಡಾ.ಎಸ್.ಪಿ. ಉಮಾದೇವಿ ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಮಹಾವಿದ್ಯಾಪೀಠ, ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು ವತಿಯಿಂದ ಕಾಲೇಜಿನ ನವಜ್ಯೋತಿ ಸಭಾಂಗಣ ದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯುವ ಕವಿಗೋಷ್ಠಿ ಉದ್ಘಾಟಿಸಿ ಮತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಕಲೆ, ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಳ್ಳಬೇಕು. ಕಲೆ ಮತ್ತು ಸಾಹಿತ್ಯದಿಂದ ದೂರವಾದವರು ಯಂತ್ರಮಾನವರಾಗುತ್ತಾರೆ ಎಂದರು.
ಇದು ಸ್ಪರ್ಧಾತ್ಮಕ ಜಗತ್ತು, ಈ ಜಗದ ಸ್ಪರ್ಧೆಗೆ ವಿದ್ಯಾರ್ಥಿಗಳು ಅಣಿಯಾಗಬೇಕು. ವಿದ್ಯಾರ್ಥಿಗಳಿಗೆ ವರ್ಷಕ್ಕೊಂದು ಬಾರಿ ಪರೀಕ್ಷೆ ಎದುರಾಗುತ್ತದೆ. ವಾರ್ಷಿಕ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಾರೆ. ಇದೇ ರೀತಿ ನಮ್ಮ ಜೀವನದ ಪರೀಕ್ಷೆ ಪ್ರತಿನಿತ್ಯ ನಡೆಯುತ್ತಿರುತ್ತದೆ. ಈ ಜೀವನದ ಪರೀಕ್ಷೆಯನ್ನು ಅತ್ಯಂತ ಜಾಣ್ಮೆಯಿಂದ ಎದುರಿಸುವುದನ್ನು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಲ್ಲರನ್ನೂ ತನ್ನಡೆಗೆ ಸೆಳೆಯುವ ಶಕ್ತಿಯನ್ನು ಭಾರತೀಯ ಸಂಸ್ಕೃತಿ ಹೊಂದಿದೆ. ಭಾರತೀಯ ಸಂಸ್ಕೃತಿ ಸಂಕುಚಿತತೆಯಿಂದ ಕೂಡಿಲ್ಲ. ಆದರೆ, ಯುವ ಸಮುದಾಯ ನಮ್ಮ ಸಂಸ್ಕೃತಿಯಿಂದ ದೂರವಾಗುತ್ತಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಡಾ.ಎಂ. ಪೂರ್ಣಿಮಾ, ಶೈಕ್ಷಣಿಕ ಡೀನ್ ಡಾ. ರೇಚಣ್ಣ, ಕವಿಗಳಾದ ಡಾ. ಜಯಪ್ಪ ಹೊನ್ನಾಳಿ, ಡಾ.ಕೆ.ಎಸ್. ಲಾವಣ್ಯ ಪ್ರಭಾ, ಕೆರೋಡಿ ಎಂ. ಲೋಲಾಕ್ಷಿ ಹಾಗೂ ಇತರರು ಇದ್ದರು.