ಯುವಕರು ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಲಿ

26LNG01
Published on

ಲಿಂಗಸುಗೂರು: ಕಳೆದ 25 ವರ್ಷಗಳ ಹಿಂದೆ ಭಾರತದ ಗಡಿಯೊಳಗೆ ನುಗ್ಗಿದ್ದ ಪಾಕ್ ಸೈನಿಕರ ಜತೆ ನಿರಂತರ 83 ದಿನ ಕಾದಾಡಿ ವಿಜಯ ಸಾಧಿಸಿದ ಭಾರತೀಯ ಸೇನೆಯ ಶೌರ್ಯ, ಪರಾಕ್ರಮ ಇಂದಿನ ಯುವಕರಿಗೆ ಪ್ರೇರಣಾದಾಯಕವಾಗಿದೆ ಎಂದು ಕರ್ನಾಟಕ ಮಾಜಿ ಸೈನಿಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಯ್ಯ ಹಿರೇಮಠ ಹೇಳಿದರು.

ಭಾರತೀಯ ಸೇನಾಪಡೆ, ಅರೆ ಸೇನಾಪಡೆ, ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಪಟ್ಟಣದ ಬಸ್ ನಿಲ್ದಾಣ ವೃತ್ತದಿಂದ ಗಡಿಯಾರ ವೃತ್ತದವರೆಗೆ ನಡೆದ ವಿಜಯೋತ್ಸವ ಮೆರವಣಿಗೆಯಲ್ಲಿ ಶುಕ್ರವಾರ ಮಾತನಾಡಿದರು. 1999 ರಲ್ಲಿ ಪಾಕಿಸ್ತಾನವೆಸಗಿದ ನಂಬಿಕೆ ದ್ರೋಹದಿಂದ ನಡೆದ ಕಾರ್ಗಿಲ್ ಯುದ್ಧ ಜಾಗತಿಕವಾಗಿ ಗಮನ ಸೆಳೆಯಿತು. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ ವಿಜಯ ಸಾಧಿಸಿದ ಭಾರತದ ವೀರ ಯೋಧರ ತ್ಯಾಗ, ಬಲಿದಾನ ಮತ್ತು ಕಾರ್ಗಿಲ್ ವಿಜಯದ ಸವಿ ನೆನಪಿಗಾಗಿ ಪ್ರತಿ ವರ್ಷ ಜು.26 ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ ಎಂದರು.

ಮಾತೃಭೂಮಿಯ ಸೇವೆ ಮಾಡುವುದು ನಮಗೆ ಸಿಕ್ಕ ಸೌಭಾಗ್ಯವಾಗಿದೆ. ಭಾರತಾಂಬೆಯ ಋಣ ತೀರಿಸಲು ಸೈನ್ಯಕ್ಕೆ ಸೇರ್ಪಡೆಗೊಂಡು ದೇಶದ ಗಡಿಭಾಗದ ದುರ್ಗಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತ ಕೆಲ ಸಂದರ್ಭದಲ್ಲಿ ಉಗ್ರಗಾಮಿಗಳ ಜತೆ ಸೆಣಸಾಡಿ ಮಾತೃಭೂಮಿ ಸೇವೆ ಮಾಡಲು ಅವಕಾಶ ದೊರೆತಿರುವುದು ನಮ್ಮ ಪೂರ್ವಜನ್ಮದ ಪುಣ್ಯವಾಗಿದೆ. ಇಂದಿನ ಯುವ ಜನತೆ ರಾಷ್ಟ್ರ ಭಕ್ತಿ, ರಾಷ್ಟ್ರ ಪ್ರೇಮ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net