ಯುವಕರ ಪ್ರೇರಣೆಗೆ ಎನ್ನೆಸ್ಸೆಸ್ ಸಹಕಾರಿ

30 SND 01
ಸಿಂಧನೂರು ತಾಲೂಕಿನ ಒಳಬಳ್ಳಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್ನೆಸ್ಸೆಸ್ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ತಹಸೀಲ್ದಾರ್ ಅರುಣ್ ದೇಸಾಯಿ ಉದ್ಘಾಟಿಸಿದರು. ಸುವರ್ಣಗಿರಿ ವಿರಕ್ತಮಠದ ಬಸವಲಿಂಗಸ್ವಾಮೀಜಿ, ಪ್ರಾಚಾರ್ಯ ರಾಮಲಿಂಗಯ್ಯ, ಎನ್ನೆಸ್ಸೆಸ್ ಅಧಿಕಾರಿ ರವಿಕುಮಾರ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಸಿಂಧನೂರು
ಭಾವೈಕ್ಯ, ಸಹಬಾಳ್ವೆ, ಸೇವಾ ಮನೋಭಾವ ರೂಢಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಅರುಣ್ ದೇಸಾಯಿ ಹೇಳಿದರು.

ತಾಲೂಕಿನ ಒಳಬಳ್ಳಾರಿ ಗ್ರಾಮದ ಸುವರ್ಣಗಿರಿ ವಿರಕ್ತಮಠದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಯಚೂರು ವಿಶ್ವವಿದ್ಯಾಲಯ, ನ್ಯಾಷನಲ್ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆ ಮಹಾತ್ಮ ಗಾಂಧೀಜಿ ಅವರ ಪರಿಕಲ್ಪನೆ. ಗ್ರಾಮಗಳ ಸ್ವರಾಜ್ಯಕ್ಕಾಗಿ ಹಾಗೂ ಅಭಿವೃದ್ಧಿಗಾಗಿ ಎನ್ನೆಸ್ಸೆಸ್ ಎಂಬ ಪರಿಕಲ್ಪನೆಯಡಿ ಯುವಕರು ಸ್ವಯಂ ಸೇವಕರಾಗಿ ಗ್ರಾಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲಾಗುತ್ತದೆ ಎಂದರು.

ಪಾಟೀಲ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಸಿ.ಪಾಟೀಲ್ ಮಾತನಾಡಿ, ಒಂದು ದೇಶದ ಮೌಲ್ಯ ಅಳೆಯುವುದು ಹಣದಿಂದಲ್ಲ. ಬದಲಿಗೆ ಆ ದೇಶದ ಪ್ರಾಮಾಣಿಕ ಯುವಜನರ ಆಧಾರದ ಮೇಲೆ. ಈ ನಿಟ್ಟಿನಲ್ಲಿ ಯುವಕರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು ಎನ್ನೆಸ್ಸೆಸ್ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸುವರ್ಣಗಿರಿ ವಿರಕ್ತಮಠದ ಬಸವಲಿಂಗಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಬಿತ್ತುವಲ್ಲಿ ಎನ್ನೆಸ್ಸೆಸ್ ವಿಶೇಷ ಪಾತ್ರ ನಿರ್ವಹಿಸುತ್ತದೆ. ಒಳಬಳ್ಳಾರಿಯಲ್ಲಿ ಏಳು ದಿನಗಳ ಕಾಲ ಶಿಬಿರಾರ್ಥಿಗಳು ಅತ್ಯುತ್ತಮ ಕಾರ್ಯನಿರ್ವಹಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಉತ್ತಮ ಕಾರ್ಯಕ್ಕೆ ಶ್ರೀಮಠ ಕೈಜೋಡಿಸಲಿದೆ ಎಂದರು.

ಒಳಬಳ್ಳಾರಿ ಚನ್ನಬಸವೇಶ್ವರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಹಂಪನಗೌಡ ಮಾತನಾಡಿದರು. ವಿಸಿಬಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಚಂದ್ರಶೇಖರ ಬೆನ್ನೂರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ನೇಮಶಪ್ಪ, ಉಪನ್ಯಾಸಕರಾದ ಶರಣಪ್ಪ, ಹನುಮಂತರಡ್ಡಿ, ಕೃಷ್ಣಾರೆಡ್ಡಿ, ಶಿವಶಂಕ್ರಯ್ಯಸ್ವಾಮಿ, ನಾಗರಾಜ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net