13 ವರ್ಷಗಳಿಂದ ನಾಪತ್ತೆಯಾಗಿದ್ದ ಯುವಕನ ಬೆಂಗಳೂರಿನಲ್ಲಿ ಪತ್ತೆ

udp-8-anantha krishna 2
Published on

ಉಡುಪಿ: ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಮನೆಯವರಿಗೆ ಹೆದರಿ 13 ವರ್ಷದ ಹಿಂದೆ ಬೆಳ್ಮಣ್​ ಸಮೀಪದ ಮುಂಡ್ಕೂರಿನಿಂದ ನಾಪತ್ತೆಯಾಗಿದ್ದ ಯುವಕನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.

2012ರಲ್ಲಿ ಕಾಣೆಯಾಗಿದ್ದ ಅನಂತಕೃಷ್ಣ ಪ್ರಭು (29) ಅವರನ್ನು ಇದೀಗ ಬೆಂಗಳೂರು ನಗರದಲ್ಲಿ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದು, ಕುಟುಂಬದ ಜೊತೆಗೆ ಸೇರಿಸಿದ್ದಾರೆ. ಪ್ರಭಾಕರ ಪ್ರಭು ಅವರ ಪುತ್ರ ಅನಂತಕೃಷ್ಣ ಪ್ರಭು (ಆಗ 16 ವರ್ಷ) ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. 2012 ಡಿಸೆಂಬರ್​ ತಿಂಗಳಲ್ಲಿ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟು ಹೋದ ಬಳಿಕ ಮನೆಗೆ ವಾಪಸ್ಸಾಗದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಕುರಿತು ತಂದೆ ನೀಡಿದ ದೂರಿನ ಮೇಲೆ ಕಾರ್ಕಳ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅನೇಕ ವರ್ಷಗಳ ಕಾಲ ಯಾವುದೇ ಸುಳಿವಿಲ್ಲದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಕೊನೆಗೆ ಅನಂತಕೃಷ್ಣ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.

ಪರೀಕ್ಷೆಯಲ್ಲಿ ಫೇಲ್​ ಆಗಿದ್ದಕ್ಕೆ ಮನೆಬಿಟ್ಟಿದ್ದ ಯುವಕ

ಅನಂತಕೃಷ್ಣ ಪ್ರಥಮ ಪಿಯುಸಿ ಪರೀಕ್ಷೆಯೊಂದರಲ್ಲಿ ಅನುತ್ತೀರ್ಣನಾಗಿದ್ದರಿಂದ ಕಾಲೇಜಿನಲ್ಲಿ ಪೋಷಕರನ್ನು ಕರೆದುಕೊಂಡು ಬರುವಂತೆ ಸೂಚಿಸಿದ್ದರು. ಇದರಿಂದ ಭಯಗೊಂಡ ಅನಂತ ಅವರು ಮನೆಯಲ್ಲಿ ವಿಷಯ ಪ್ರಸ್ತಾಪಿಸದೆ ಊರು ಬಿಟ್ಟಿದ್ದರು. ಸಕಲೇಶಪುರದಲ್ಲಿ ್ಯಾಕ್ಟರಿ ಒಂದರಲ್ಲಿ ಕೆಲಸಕ್ಕೆ ಸೇರಿದ್ದು, ಇವರ ಗುಣನಡತೆ ಮೆಚ್ಚಿದ ಮಾಲೀಕರು ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ್ದರು. ಇದರಿಂದ ಪದವಿ ಪೂರ್ಣಗೊಳಿಸಿ ಬೆಂಗಳೂರಿನಲ್ಲಿ ಯಶಸ್ವಿ ಇಂಟೀರಿಯರ್​ ಡಿಸೈನರ್​ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅನಂತಕೃಷ್ಣ ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿದ್ದು, ಸ್ವಂತ ಫ್ಲ್ಯಾಟ್​, ಹೊಸ ಕಾರು ಖರೀದಿಸಿದ್ದರು. ಜೀವನದಲ್ಲಿ ಸೆಟಲ್​ ಆದ ಬಳಿಕ ಮನೆಗೆ ಬರಬೇಕು ಎಂಬ ಬಯಕೆ ಹೊಂದಿದ್ದು, ಈ ಹಂತದಲ್ಲೇ ಪೊಲೀಸರು ಅವರನ್ನು ಪತ್ತೆ ಹಚ್ಚಿರುವುದರಿಂದ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net