ಯುವ ಸಾಹಿತಿ ಹೊಸ ಶೈಲಿ ರೂಢಿಸಿಕೊಳ್ಳಲಿ

27 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಯುವ ಸಾಹಿತಿಗಳು ರೂಢಿಗತ ಛಂದಸ್ಸನ್ನು ಮುರಿದು ಹೊಸ ಶೈಲಿ ರೂಢಿಸಿಕೊಳ್ಳಬೇಕಿದೆ. ಇದರಿಂದ ಉತ್ಕೃಷ್ಟ ಹಾಗೂ ಕ್ರಿಯಾಶೀಲ ಸಾಹಿತ್ಯ ಹೊರಹೊಮ್ಮಲು ಸಾಧ್ಯ ಎಂದು ಮೈಸೂರಿನ ಹಿರಿಯ ಸಾಹಿತಿ ಡಾ. ಓ.ಎಲ್​. ನಾಗಭೂಷಣಸ್ವಾಮಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ 2 ದಿನಗಳವರೆಗೆ ಏರ್ಪಡಿಸಿರುವ ಕಣ್ಣ ಮುಂದಿನ ಬೆಳಕು ರಾಜ್ಯ ಮಟ್ಟದ ಯುವ ಸಾಹಿತ್ಯ ಸಮಾವೇಶಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ರೂಢಿ ಮುರಿಯುವುದು ಎಂದರೆ ಇರೋದನ್ನು ಇದ್ದಂತೆ ಹೇಳುವುದು. ರೂಢಿಗತ ಹೇಗೆ ಎಂಬುದನ್ನು ಅರಿಯದಿದ್ದರೆ ಕವಿಯಾಗುವುದು ಅಸಾಧ್ಯ. ಮಕ್ಕಳಿಗಿಂತಲೂ ದೊಡ್ಡ ಪ್ರತಿಭಟನಾಕಾರರು ಯಾರೂ ಇಲ್ಲ. ಅವರ ಪ್ರಶ್ನೆಗಳೇ ವಿಶಿಷ್ಟವಾಗಿರುತ್ತವೆ. ಯುವ ಕವಿಗಳು ತಮ್ಮ ಬರವಣಿಗೆ ಜನರಿಗೆ ಅರ್ಥವಾಗುತ್ತದೆಯೇ ಎಂಬ ಭಾವನೆ ಬಿಡಬೇಕು. ತಮಗೆ ತೋಚಿದನ್ನು ಬರೆಯಬೇಕು. ನಮಗಾಗಿ ಬರೆಯಬೇಕೇ ಹೊರತು ಓದುಗರನ್ನು ಮೆಚ್ಚಿಸುವುದಕ್ಕಲ್ಲ ಎಂದರು.
ಇಳಕಲ್​ ಸಾಹಿತಿ ಅರಿಫರಾಜ್​ ಮಾತನಾಡಿ, ಸಾಹಿತ್ಯ ಕೃತಿಗಳ ಮೌಲ್ಯಮಾಪನ ನಡೆಯಬೇಕು. ಹಲವು ಲೇಖಕರು ಸಂಪ್ರದಾಯ ಮೀರಿ ಹೊಸ ಬಗೆಯಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಬಲಪಂಥ, ಎಡಪಂಥ ಎನ್ನುವುದು ಸವಕಲು ನಾಣ್ಯವಾಗಿದ್ದು, ಸಂವಿಧಾನ ಪರ ಹಾಗೂ ವಿರೋಧಿ ಎಂದು ಬಳಕೆ ಮಾಡುವುದು ಸೂಕ್ತ. ಹೊಸ ತಲೆಮಾರಿನ ಸಾಹಿತ್ಯವನ್ನು ಓದಲು ನಾವು ತಯಾರಿಲ್ಲ. ಯುವ ಲೇಖಕರ ಸಾಹಿತ್ಯದ ಸಮರ್ಪಕ ವಿಮರ್ಶೆ ನಡೆದರೆ ಇನ್ನಷ್ಟು ಸಾಹಿತ್ಯ ಕೃಷಿ ಮಾಡಲು ಪ್ರೇರಣೆ ಸಿಗುತ್ತದೆ ಎಂದರು.
ಕವಿವ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಸಾಹಿತಿಗಳು ಸಮಾಜದ ಅನ್ಯಾಯಕ್ಕೆ ಸ್ಪಂದಿಸುವುದಿಲ್ಲ ಎಂಬ ಆರೋಪವಿದೆ. ಸಾಹಿತಿಗಳು ಅನ್ಯಾಯ ನೋಡಿಕೊಂಡು ಸುಮ್ಮನೆ ಇರಬಾರದು. ಸಾಹಿತ್ಯದ ಮೂಲಕ ಪ್ರತಿಭಟಿಸಬೇಕಲ್ಲದೆ ಸಂದರ್ಭ ಬಂದರೆ ಬೀದಿಗಿಳಿಯಬೇಕು. ಸಮಾಜಕ್ಕೆ ನೋವಾದಾಗ ಪ್ರತಿಭಟಿಸಲು ಮುಂದಾಗಬೇಕು ಎಂದರು.
ಸಾಹಿತಿ ಡಾ. ಎಂ.ಡಿ. ಒಕ್ಕುಂದ ಆಶಯ ಭಾಷಣ ಮಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಶಂಕರ ಹಲಗತ್ತಿ, ವೀರಣ್ಣ ಒಡ್ಡೀನ, ಶಂಕರ ಕುಂಬಿ, ಇತರರು ಇದ್ದರು.
ನಂತರ ಅಂತರಂಗದ ಮೃದಂಗ, ಹೊಟ್ಯಾಗಿನ ಮಾತು ಗೋಷ್ಠಿಗಳು ಹಾಗೂ ಕವಿ ಗೋಷ್ಠಿ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net