

ಶಿಕಾರಿಪುರ: ಪಟ್ಟಣದ ಕೆಎಚ್‌ಬಿ ಲೇಔಟ್‌ನಲ್ಲಿ ಸೋಮವಾರ ಮಧ್ಯಾಹ್ನ ಈದ್ ಮಿಲಾದ್ ಕಮಿಟಿ ರಚನೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಚಾಕುವಿನಿಂದ ಇರಿದು ಯುವಕನ ಹತ್ಯೆ ಮಾಡಲಾಗಿದೆ.
ಕೆಎಚ್‌ಬಿ ಲೇಔಟ್‌ನ ಜಾಫರ್ ಸಾಬ್ (32) ಮೃತ ಯುವಕ. ಕೊಲೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಭಾನುವಾರ ನಡೆಯಬೇಕಿದ್ದ ಈದ್ ಕಮಿಟಿ ಸಭೆ ಸೋಮವಾರಕ್ಕೆ ಮುಂದೂಡಲಾಗಿತ್ತು. ಮಧ್ಯಾಹ್ನ ಸಭೆ ನಡೆಯುತ್ತಿದ್ದ ವೇಳೆ ಜಾಫರ್ ಮತ್ತು ಮತ್ತೊಂದು ಗುಂಪಿನ ನಡುವೆ ಕಮಿಟಿ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಚಾಕುವಿನಿಂದ ಜಾಫರ್ ಮೇಲೆ ಎದೆಗೆ ಇರಿದಿದ್ದು ಗಂಭೀರವಾಗಿ ಗಾಯಗೊಂಡಿದ್ದ ಜಾಫರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿಷಯ ತಿಳಿದ ಡಿವೈಎಸ್ಪಿ ಶಿವಾನಂದ ಮದರಕಂಡಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಹಾಡಹಗಲೇ ನಡೆದ ಈ ಕೊಲೆಯಿಂದ ಸಹಜವಾಗಿ ನಾಗರಿಕರಲ್ಲಿ ಆತಂಕ ಉಂಟಾಗಿದೆ. ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಹಾಕಲಾಗಿದ್ದು ಘಟನೆ ನಡೆದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್‌ಕುಮಾರ್ ಭೂಮರಡ್ಡಿ ಭೇಟಿನೀಡಿ ಪರಿಶೀಲನೆ ನಡೆಸಿದರು. ಸೆಪ್ಟೆಂಬರ್ 28ರಂದು ನಡೆಯುವ ಈದ್ ಮಿಲಾದ್ ಹಬ್ಬಕ್ಕೆ ತಯಾರಿ ವಿಚಾರದಲ್ಲಿ ಸಭೆ ನಡೆಸಲಾಗಿತ್ತು.