

ಮಡಿಕೇರಿ: ಯುವ ಜನತೆ ದೇಶಕ್ಕೆ ಬೆನ್ನೆಲುಬು ಆಗಿದ್ದು, ಕ್ರೀಡೆ, ನೃತ್ಯ, ಸಂಗೀತ, ಸಾಹಿತ್ಯ ಮತ್ತಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಿ.ಜೆ.ಜವರಪ್ಪ ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆದ ಸಾಂಸ್ಕೃತಿಕ ಕ್ರೀಡೆ, ಪಠ್ಯೇತರ ಮತ್ತು ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಓದಿನ ಜತೆಗೆ ಸಾಹಿತ್ಯ, ಸಂಗೀತ, ಕ್ರೀಡೆ, ಹೀಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಸದಾ ಚಟುವಟಿಕೆಯಿಂದ ಇರಬಹುದು. ಇದರಿಂದ ಬೇರೆಡೆ ಗಮನ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ಲಭ್ಯವಿರುವ ಕಾಲಾವಕಾಶವನ್ನು ಸರಿಯಾಗಿ ಬಳಸಿಕೊಂಡು ಮುನ್ನಡೆಯಬೇಕು ಎಂದು ಡಿ.ಜೆ.ಜವರಪ್ಪ ಸಲಹೆ ಮಾಡಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಲೇಖಕಿ ಡಾ.ಕೋರನ ಸರಸ್ವತಿ ಪ್ರಕಾಶ್ ಮಾತನಾಡಿ, ಮೊಬೈಲ್ ಗೀಳನ್ನು ಬಿಟ್ಟು ಒಳ್ಳೆಯ ಪುಸ್ತಕ ಹೆಚ್ಚಾಗಿ ಓದಬೇಕು. ತಲೆಬಗ್ಗಿಸಿ ಪುಸ್ತಕ ಓದಿದರೆ ಮುಂದೊಂದು ದಿನ ತಲೆ ಎತ್ತುವಂತೆ ಮಾಡುತ್ತದೆ. ತಲೆ ಬಗ್ಗಿಸಿ ಮೊಬೈಲ್ ನೋಡುತ್ತಿದ್ದರೆ ಮೊಬೈಲ್ ನೋಡಿಯೇ ಜೀವನ ಕಳೆದು ಹೋಗುತ್ತದೆ. ಆದ್ದರಿಂದ ಪುಸ್ತಕ ಓದುವ ಹವ್ಯಾಸ ರೂಡಿಸಿಕೊಂಡರೆ ಮಾನಸಿಕ ನೆಮ್ಮದಿಯನ್ನು ಹೆಚ್ಚು ಸಂಪಾದಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಮೊಬೈಲನ್ನು ದೂರ ಮಾಡಿ ಸಹಪಾಠಿಗಳೊಂದಿಗೆ ಬೆರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪತ್ರಕರ್ತೆ ಜಿ.ಆರ್.ಪ್ರಜ್ಞಾ ಮಾತನಾಡಿ, ವೈಯಕ್ತಿಕ ಬದುಕಿನಲ್ಲಿ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿ ಜೀವನವನ್ನು ಸುಗಮವಾಗಿರಿಸಲು ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಮನಸ್ಸಿನಲ್ಲಿ ಏಕಾಗ್ರತೆ, ಶ್ರದ್ಧೆ, ಭಕ್ತಿ, ಆತ್ಮವಿಶ್ವಾಸ ಇದ್ದರೆ ಯಾವ ವಿಷಯದಲ್ಲಿಯೂ ಯಾವ ಕ್ಷೇತ್ರದಲ್ಲಿಯೂ ಸಾಧನೆ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಕೋರನ ಸರಸ್ವತಿ ಪ್ರಕಾಶ್‌ರವರು ರಚಿಸಿರುವ ಪತ್ತಾಯ, ನುಡಿದೀಪ, ಅರೆಭಾಷೆ ಗಾದೆಗಳು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಕೆ.ಬಸವರಾಜು, ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕಿ ಡಾ.ಡಿ.ಕನ್ನಿಕಾ, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇತರರು ಇದ್ದರು.