

ಬೆಂಗಳೂರು: ದೇಶದ ಸಂವಿಧಾನ ತತ್ವಗಳ ಜೀವಾಳವಾಗಿರುವ ಪ್ರಜಾಪ್ರಭುತ್ವ ಮೌಲ್ಯಗಳನ್ನು ಮರುಸ್ಥಾಪಿಸಲು ಯುವನತೆ ಮುಂದಾಗಬೇಕಿದೆ ಎಂದು ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ಏರ್‌ಪೋರ್ಟ್ ರಸ್ತೆಯ ನವರತ್ನ ಅಗ್ರಹಾರದ ಎಂ.ಎಸ್.ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ಕ್ರಮೇಣ ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿದೆ. ಇದರಿಂದ ಮೂಲ ಸಂವಿಧಾನಕ್ಕೆ ಚ್ಯುತಿ ಮಾಡಿದಂತಾಗಿದೆ. ಇಡೀ ವಿಶ್ವಕ್ಕೆ ಮಾದರಿಯಾಗಿರುವ ಭಾರತದ ಸಂವಿಧಾನ ಹಾಗೂ ಅದರ ಮೌಲ್ಯಗಳನ್ನು ಉಳಿಸುವುದು ಯುವಜನತೆಯ ಕರ್ತವ್ಯವಾಗಬೇಕು. ವಿದ್ಯಾರ್ಥಿಗಳು ತಮ್ಮ ತಮ್ಮ ವ್ಯಾಸಂಗದ ಜತೆಗೆ ದೇಶಸೇವೆಯ ಬಗ್ಗೆಯೂ ಕಾಳಜಿ ವಹಿಸಲು ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಇಂದಿನ ಪೀಳಿಗೆಯ ವಿದ್ಯಾವಂತರು ಭ್ರಷ್ಟಾಚಾರದಲ್ಲಿ ತೊಡಗದೆ ದುರಾಸೆಗಳನ್ನು ತ್ಯಜಿಸಿ ಜೀವನದಲ್ಲಿ ತೃಪ್ತಿ, ಮಾನವೀಯ ಮೌಲ್ಯಗಲು ಹಾಗೂ ಶಾಂತಿ ಸಹಬಾಳ್ವೆ ಅಳವಡಿಸಿಕೊಂಡು ದೇಶದ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡಲು ಶ್ರಮಿಸಬೇಕು ಎಂದು ಸಂತೋಷ್ ಹೆಗ್ಡೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ರಾಣಾಪ್ರತಾಪ್ ರೆಡ್ಡಿ, ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಸುದರ್ಶನ್ ರಾಜು ಮತ್ತಿತರರಿದ್ದರು.