

ಬೆಳ್ತಂಗಡಿ: ಬೆಳಾಲು ಗ್ರಾಮದ ಪೆರಿಯಡ್ಕದಲ್ಲಿ ಕಾಡುಕೋಣಗಳ ಹಿಂಡೊಂದು ದಾಳಿ ನಡೆಸಿದ ಪರಿಣಾಮ ಲೋಕೇಶ್ ಎಂಬುವರು ಗಾಯಗೊಂಡಿದ್ದಾರೆ.
ಆ.23ರಂದು ಸಂಜೆ 7ರ ಸುಮಾರಿಗೆ ಲೋಕೇಶ್ ಕೆಲಸ ಮುಗಿಸಿ ಉಜಿರೆಯಿಂದ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಪೆರಿಯಡ್ಕದಲ್ಲಿ ಕಾಡುಕೋಣವೊಂದು ಅಡ್ಡ ಬಂದಿತ್ತು. ಬೈಕ್ ನಿಲ್ಲಿಸಿದಾಗ ಸುಮಾರು 10ರಷ್ಟಿದ್ದ ಕಾಡುಕೋಣಗಳ ಹಿಂಡು ಹಿಂದಿನಿಂದ ಧಾವಿಸಿ ಬರುತ್ತಿದ್ದನ್ನು ಗಮನಿಸಿದ ಲೋಕೇಶ್ ಮುಂದೆ ಹೋಗಲು ಯತ್ನಿಸಿದಾಗ ಕಾಡುಕೋಣವೊಂದು ದಾಳಿ ನಡೆಸಿದೆ. ವಾಹನ ಸಹಿತ ಅವರು ಸ್ವಲ್ಪ ದೂರ ಎಸೆಯಲ್ಪಟ್ಟಿದ್ದಾರೆ. ನಂತರ ಮತ್ತೊಂದು ಕಾಡುಕೋಣವೂ ದಾಳಿಗೆ ಮುಂದಾದಾಗ ತಪ್ಪಿಸಿಕೊಂಡಿದ್ದಾರೆ. ಲೋಕೇಶ್ ಅವರ ಕಾಲು ಹಾಗೂ ಬೆನ್ನಿಗೆ ಗಾಯವಾಗಿದ್ದು, ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಲ್ಮೆಟ್ ಇದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆತಂಕದ ಸ್ಥಿತಿ: ಕೆಲವು ವರ್ಷಗಳಿಂದ ಈ ಭಾಗದಲ್ಲಿ ಕಾಡುಕೋಣಗಳ ಹಾವಳಿಯಿಂದ ಕೃಷಿ ಹಾಳಾಗುತ್ತಿದ್ದು, ಸಂಬಂಧಪಟ್ಟ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಪಟಾಕಿ ಅಥವಾ ಶಬ್ಧ ಮಾಡಿ ಓಡಿಸುವಂತೆ ಉಡಾಫೆ ಉತ್ತರ ನೀಡಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ವೃದ್ಧೆಯೊಬ್ಬರು ಕಾಡುಕೋಣ ದಾಳಿಯಿಂದ ಗಾಯಗೊಂಡು ಎರಡು ತಿಂಗಳು ಚಿಕಿತ್ಸೆ ಪಡೆದು ಮೃತಪಟ್ಟಿದ್ದಾರೆ. ಕೆಲದಿನಗಳ ಹಿಂದೆ ವ್ಯಕ್ತಿಯೊಬ್ಬರಿಗೂ ಕಾಡುಕೋಣ ದಾಳಿ ನಡೆಸಿದ್ದು ಅವರು ಕೈ ಮುರಿತಕ್ಕೊಳಗಾಗಿದ್ದಾರೆ. ಹಗಲು ಹೊತ್ತಿನಲ್ಲೂ ಆತ್ತಿತ್ತ ಓಡಾಡುವ ಕಾಡುಕೋಣಗಳಿಂದಾಗಿ ಸ್ಥಳೀಯ ಶಾಲೆಗೆ ಮಕ್ಕಳನ್ನು ಕಳುಹಿಸಲೂ ಪಾಲಕರು ಹೆದರುವಂತಾಗಿದೆ. ಪ್ರಾಣಹಾನಿ ಸಂಭವಿಸುವ ಮೊದಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ.