

ಮಂಗಳೂರು: ಯೆಯ್ಯಡಿ ಬಳಿಯ ಬಾರೊಂದಕ್ಕೆ ಊಟಕ್ಕೆ ಹೋಗಿದ್ದ ಕೌಶಿಕ್ ಎಂಬವರಿಗೆ ಬೃಜೇಶ್ ಎಂಬಾತ ಇತರರ ಜತೆ ಸೇರಿಕೊಂಡು ಚಾಕುವಿನಿಂದ ಇರಿದು ಕೊಲೆ ಬೆದರಿಕೆ ಹಾಕಿದ ಘಟನೆ ಶುಕ್ರವಾರ ನಡೆದಿದೆ.
ಕೌಶಿಕ್ ಮಧ್ಯಾಹ್ನ 2 ಗಂಟೆಯ ವೇಳೆಗೆ ಊಟಕ್ಕೆ ಬಾರ್‌ಗೆ ಹೋಗಿದ್ದು, ಈ ವೇಳೆ ತನ್ನ ಸ್ನೇಹಿತ ರಾಹುಲ್‌ನನ್ನೂ ಊಟಕ್ಕೆ ಕರೆದಿದ್ದಾರೆ. ರಾಹುಲ್ ಅಲ್ಲಿಗೆ ಹೋದಾಗ ಮತ್ತೊಂದು ಟೇಬಲ್‌ನಲ್ಲಿ ಕುಳಿತ್ತಿದ್ದ ಚೈನೀಸ್ ಗಣೇಶ್, ಶಿಜು ಮತ್ತು ಬ್ರಿಜೇಶ್ ಎಂಬವರು ಕೌಶಿಕ್‌ಗೆ ಬಯ್ಯುತ್ತಿದ್ದುದು ಕಂಡು ಬಂದಿದೆ. ಮೂವರೂ ಹೊಡೆಯಲು ಬಂದಾಗ ರಾಹುಲ್ ಸಮಾಧಾನ ಪಡಿಸಿ ತಡೆದಿದ್ದಾರೆ. ಮತ್ತೆ ಬೊಬ್ಬೆ ಜೋರಾಗುತ್ತಿದ್ದಂತೆ ಬಾರ್‌ನ ಕೆಲಸಗಾರರು ಎಲ್ಲರನ್ನು ಹೊರಗೆ ಕಳುಹಿಸಿದ್ದು, ಆ ವೇಳೆ ಬೃಜೇಶ್ ತನ್ನಲ್ಲಿದ್ದ ಚೂರಿಯಿಂದ ಕೌಶಿಕ್‌ನ ಹೊಟ್ಟೆಯ ಬಲಭಾಗ, ಎದೆಯ ಎಡಭಾಗಕ್ಕೆ ಇರಿದು ಪರಾರಿಯಾಗಿದ್ದಾನೆ.
ಸುಮಾರು ಒಂದು ತಿಂಗಳ ಹಿಂದೆ ಸಂತು ಹಾಗೂ ಕೌಶಿಕ್‌ಗೆ ಯಾವುದೋ ಕಾರಣಕ್ಕೆ ಗಲಾಟೆಯಾಗಿತ್ತು. ಈ ವಿಚಾರವಾಗಿ ಪರಿಚಯದವರೇ ಆದ ಆಟೋ ಚಾಲಕ ಚೈನೀಸ್ ಗಣೇಶ್, ಶಿಜು ಮತ್ತು ಬ್ರಿಜೇಶ್ ಜತೆ ಸೇರಿಕೊಂಡು ಕೌಶಿಕ್‌ನೊಂದಿಗೆ ತಗಾದೆ ತೆಗೆದು, ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ಈ ವೇಳೆ ಬ್ರಿಜೇಶ್ ಚಾಕುವಿನಿಂದ ಇರಿದು, ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.
ಕೌಶಿಕ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.