ಕುವೆಂಪು ಪಾರ್ಕ್​ನಲ್ಲಿ ಯುವಕರ ಪುಂಡಾಟಿಕೆ

14 KLR 03
Published on

ಕೋಲಾರ: ನಗರದ ಹೊಸ ಬಸ್​ನಿಲ್ದಾಣ ಸಮೀಪದ ಅಂತರಗಂಗೆ ರಸ್ತೆಯಲ್ಲಿರುವ ಕುವೆಂಪು ಉದ್ಯಾನವನ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಪಾರ್ಕ್​ನ ಆವರಣದಲ್ಲಿರುವ ರಾಷ್ಟ್ರಕವಿ ಕುವೆಂಪು ಪುತ್ಥಳಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆವರಣದಲ್ಲಿ ಕುವೆಂಪು ಹಾಗೂ ವರನಟ ಡಾ.ರಾಜಕುಮಾರ್​ ಪುತ್ಥಳಿಗಳಿದ್ದು, ಇವುಗಳಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಕುವೆಂಪು ಪುತ್ಥಳಿ ವಿರೂಪಗೊಳಿಸಿರುವುದು ಬುಧವಾರ ಸಂಜೆ ಸಾರ್ವಜನಿಕರ ವಲಯದಲ್ಲಿ ಸುದ್ದಿ ಹರಡುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಸ್ಥಳಕ್ಕೆ ಧಾವಿಸಿ ಕೃತ್ಯ ಖಂಡಿಸಿದ್ದಾರೆ.

ಇತ್ತೀಚೆಗೆ ಪಾರ್ಕ್​ ನಿರ್ವಹಣೆ ಇಲ್ಲದ ಕಾರಣ ಸಾರ್ವಜನಿಕರು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪಾರ್ಕ್​ ಅನ್ನು ಹರಟೆ ತಾಣವನ್ನಾಗಿ ಮಾಡಿಕೊಂಡಿದ್ದು, ಶಾಲಾ&ಕಾಲೇಜು ಬಿಡುವಿನ ವೇಳೆ ಕಾಲಹರಣ ಮಾಡುವ ಸಲುವಾಗಿ ಇಲ್ಲೇ ಕುಳಿತು ಕಾಲ ಕಳೆಯುವುದು, ಅಸಭ್ಯ ವರ್ತನೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಇನ್ನುಳಿದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.

ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕರು ಮತ್ತು ವಯೋವೃದ್ಧರು ವಾಯು ವಿಹಾರಕ್ಕಾಗಿ ಪಾರ್ಕಿಗೆ ಬಂದಾಗ ಯುವಕರು ಗುಂಪುಗಳಾಗಿ ಸೇರಿಕೊಂಡು ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಿಸುವುದು, ಕುಣಿದು ಕೇಕೆ ಚಪ್ಪಾಳೆ ಹಾಕುವುದರಿಂದ ವಿಹಾರಕ್ಕೆ ಬರುವವರಿಗೆ ತೊಂದರೆಯಾಗುತ್ತಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ವಿದ್ಯಾರ್ಥಿಗಳು ತಾವು ತಂದ ತಿಂಡಿ, ತಿನಿಸುಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಹೋಗುವುದರಿಂದ ಎಲ್ಲೆಂದರಲ್ಲಿ ಕಸ ಹಾಗೇ ಇರುತ್ತದೆ. ದೂರದಿಂದ ವಾಯುವಿಹಾರಕ್ಕೆ ಬರುವವರಿಗೆ ಪಾರ್ಕಿಂಗ್​ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

ನಗರಸಭೆಯವರು ಪಾರ್ಕ್​ ನಿರ್ವಹಣೆ ಜವಾಬ್ದಾರಿ ತೆಗೆದುಕೊಂಡು, ಬೆಳಗ್ಗೆಯಿಂದ ಸಂಜೆಯತನಕ ಸಿಬ್ಬಂದಿ ನೇಮಿಸಿದ್ದೇ ಆದರೆ ಅವ್ಯವಹಾರಗಳಿಗೆ ಕಡಿವಾಣ ಹಾಕಬಹುದು ಎಂದು ವಾಯುವಿಹಾರಿಯೊಬ್ಬರು ಮನವಿ ಮಾಡಿದ್ದಾರೆ.

ಸ್ವಚ್ಛತೆ ಮರೀಚಿಕೆ

ಇತ್ತೀಚೆಗೆ ಮಳೆ ಸುರಿಯುತ್ತಿರುವುದರಿಂದ ಪಾರ್ಕ್​ನಲ್ಲಿ ನೀರು ತುಂಬಿದ್ದು, ಕೆಸರು ಗದ್ದೆಯಂತಾಗಿದೆ. ನೀರು ಸರಾಗವಾಗಿ ಹೋಗಲು ಕಾಲುವೆ ವ್ಯವಸ್ಥೆ ಕಲ್ಪಿಸಿಲ್ಲ. ಪಾರ್ಕ್​ ಆವರಣದಲ್ಲಿ ಕುಳಿತುಕೊಳ್ಳಲು ಇರುವ ಕಲ್ಲಿನ ಬೆಂಚುಗಳನ್ನು ಮುರಿದು ಹಾಕಿದ್ದಾರೆ. ಇದರಿಂದ ಆಸನ ವ್ಯವಸ್ಥೆ ಇಲ್ಲದೆ ವಾಯು ವಿಹಾರಕ್ಕೆ ಬರುವವರಿಗೆ ಆಯಾಸವಾದ ಕುಳಿತುಕೊಳ್ಳೂ ಆಸನ ಇಲ್ಲದೇ ಪರದಾಡುವಂತಾಗಿದೆ.

ಸುತ್ತಲೂ ತಲೆ ಎತ್ತಿದ ಮಳಿಗೆಗಳು

ಪಾರ್ಕಿನ ಸುತ್ತಲೂ ಇರುವ ಚರಂಡಿಯ ಮೇಲೆ ಅಂಗಡಿ ಮತ್ತು ಹೋಟೆಲ್​ಗಳು ತಲೆ ಎತ್ತಿದ್ದು, ಅವುಗಳಿಂದ ಬೀಳುವ ತ್ಯಾಜ್ಯವನ್ನು ಚರಂಡಿಗಳಿಗೆ ಎಸೆಯುತ್ತಿದ್ದಾರೆ. ಚರಂಡಿಯಲ್ಲಿರುವ ನೀರು ಸರಾಗವಾಗಿ ಹೋಗಲು ತ್ಯಾಜ್ಯ ಗಬ್ಬುನಾರುವಂತೆ ಆಗಿದೆ.

ರಾಷ್ಟ್ರಕವಿ ಕುವೆಂಪು ಅವರ ಪುತ್ಥಳಿ ವಿರೋಪಗೊಂಡಿಲ್ಲ. ಸ್ವಚ್ಛತೆ ಇಲ್ಲದೆ ಇತ್ತು. ಗುರುವಾರ ಸ್ವಚ್ಛಗೊಳಿಸಲಾಗಿದೆ. ಈ ಹಿಂದೆಯೇ ಸ್ವಲ್ಪ ಮೂಗಿನ ಭಾಗ ವಿರೂಪಗೊಂಡಿದೆ. ಈಗ ವಿರೂಪಗೊಂಡಿಲ್ಲ. ಆವರಣದಲ್ಲಿರುವ ಡಾ.ರಾಜ್​ಕುಮಾರ್​ ಮತ್ತು ಕುವೆಂಪು ಅವರ ಎರಡು ಪುತ್ಥಳಿಗಳಿಗೆ ಭದ್ರತೆ ನೀಡಲಾಗುವುದು. ನಗರದಲ್ಲಿರುವ ಎಲ್ಲ ಪಾರ್ಕ್​ಗಳ ನಿರ್ವಹಣೆ ಮಾಡಲು ಸಿಬ್ಬಂದಿ ನೇಮಿಸಲಾಗಿದೆ. ಅವರುಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಲಾಗುವುದು. ಕುವೆಂಪು ಪಾರ್ಕ್​ನ್ನು ಸ್ವಚ್ಛಗೊಳಿಸಲಾಗುವುದು. ನೀರು ನಿಲ್ಲದಂತೆ ಕಾಲುವೆ ವ್ಯವಸ್ಥೆ ಮಾಡಲಾಗುವುದು.

-ನವೀನ್​ಚಂದ್ರ

ಆಯುಕ್ತ, ನಗರಸಭೆ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net