

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ಪ್ರತಿದಿನ ಐದು ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವುದನ್ನು ಖಂಡಿಸಿ ಮಂಡ್ಯ ಯೂತ್ ಗ್ರೂಪ್ ಸದಸ್ಯರು ನಗರದಲ್ಲಿ ಬುಧವಾರ ವಿನೂತನ ಪ್ರತಿಭಟನೆ ನಡೆಸಿದರು.
ಕಾವೇರಿ ಅನ್ಯಾಯ ಎಂಬ ಘೋಷಣೆಯಡಿ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಹಾಗೂ ಕೈಯಲ್ಲಿ ತಕ್ಕಡಿ ಹಿಡಿದು ಪ್ರತಿಭಟನಾ ಮೆರವಣಿಗೆ ಮೂಲಕ ಆಕ್ರೋಶ ಹೊರಹಾಕಿದರು.
ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಮಾತನಾಡಿ, ಪ್ರತಿಬಾರಿಯೂ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಸಂಕಷ್ಟದ ಸೂತ್ರ, ನೀರು ಹಂಚಿಕೆ ಸೇರಿದಂತೆ ಯಾವುದೇ ನಿಯಮಗಳು ಒಂದೆಡೆ ಇರಲಿ. ತಮಿಳುನಾಡು ಬೆಳೆಗೆಂದು ನೀರು ಕೇಳುತ್ತಿದೆ. ಆದರೆ ಇಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಇದೆ. ಈ ಪರಿಸ್ಥಿತಿಯನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯಸರ್ಕಾರ ಮನದಟ್ಟು ಮಾಡಬೇಕಿದೆ ಎಂದು ಒತ್ತಾಯಿಸಿದರು.
ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ತ.ನಾಡಿಗೆ ನೀರು ಹರಿದಿದೆ. ಮತ್ತೆ ಪ್ರತಿದಿನ 5 ಸಾವಿರ ಕ್ಯೂಸೆಕ್‌ನಂತೆ ನೀರು ಬಿಟ್ಟರೆ ಹದಿನೈದು ದಿನಕ್ಕೆ 75 ಸಾವಿರ ಕ್ಯೂಸೆಕ್ ನೀರು ಹೋಗಲಿದೆ. ಪರಿಣಾಮ ಡ್ಯಾಂನ ನೀರಿನ ಮಟ್ಟ ಕುಸಿಯಲಿದೆ. ಮುಂದಿನ ದಿನದಲ್ಲಿ ಮಳೆ ಬರುವ ನಿರೀಕ್ಷೆಯೂ ಕ್ಷೀಣಿಸುತ್ತಿದೆ. ಹೀಗಿರುವಾಗ ಕುಡಿಯುವ ನೀರಿಗೆ ಏನು ಮಾಡಬೇಕು?. ಇದು ಪ್ರಾಧಿಕಾರದ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರೂಪ್‌ನ ಸದಸ್ಯರಾದ ಪ್ರತಾಪ್, ರಾಜಣ್ಣ, ವಿನಯ್, ದರ್ಶನ್, ಸೈಯದ್, ದೀಪು, ರಕ್ಷಿತ್ ಇತರರಿದ್ದರು. ಮಹಾವೀರ ವೃತ್ತದಿಂದ ಹೊರಟ ಮೆರವಣಿಗೆ ವಿ ವಿ ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ವೃತ್ತದ ಮೂಲಕ ಸಾಗಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮುಕ್ತಾಯವಾಯಿತು.