

ಶಿವಮೊಗ್ಗ: ರಾಜ್ಯ ಸರ್ಕಾರದ ಮಹತ್ವದ 5ನೇ ಗ್ಯಾರಂಟಿ ಯುವನಿಧಿಗೆ ಜ.12ರಂದು ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಚಾಲನೆ ನೀಡಲಿದ್ದು ಎರಡು ಲಕ್ಷ ಜನರು ಸೇರುವ ನಿರೀಕ್ಷೆ ಇದೆ.
ಜನಪರ ಸರ್ಕಾರ ಅಧಿಕಾರಕ್ಕೆ ಬಂದ ಏಳು ತಿಂಗಳಲ್ಲೇ 5ನೇ ಗ್ಯಾರಂಟಿ ಯುವನಿಧಿಯನ್ನೂ ಜಾರಿಗೊಳಿಸುತ್ತಿದೆ. ಈ ಮೂಲಕ 58 ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ ನೀಡಲಾಗುತ್ತಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯುವಜನರಿಗಾಗಿ ಸರ್ಕಾರ ವಿಶೇಷ ಆಸಕ್ತಿ ವಹಿಸಿ ಕಾರ್ಯಕ್ರಮ ಆಯೋಜಿಸಿದ್ದು ಯುವಜನತೆ ಈ ಯೋಜನೆಯ ಸದ್ಬಳಕೆ ಪಡೆದುಕೊಳ್ಳಬೇಕು. ಗ್ಯಾರಂಟಿಗಳ ಅನುಷ್ಠಾನ ಸಂಬಂಧ ರಾಜ್ಯ ಸರ್ಕಾರ ಸಮಿತಿಗಳನ್ನು ರಚಿಸಿ ಎಲ್ಲರಿಗೂ ಸರ್ಕಾರದ ಸೇವೆ ಸಿಗುವಂತೆ ಮಾಡಲಾಗುತ್ತಿದೆ. ಸಮಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲು ನಿರ್ಧರಿಸಿದೆ ಎಂದರು.
ಯುವನಿಧಿ ಕಾರ್ಯಕ್ರಮಕ್ಕೆ ಯುವಕರು ಹೆಚ್ಚಾಗಿ ಭಾಗವಹಿಸಬೇಕಿದೆ. ಈಗಾಗಲೇ 70 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಅವರೆಲ್ಲರಿಗೂ ಡಿಬಿಟಿ ಮೂಲಕವೇ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಲಿದೆ. ರಾಜ್ಯ ಸರ್ಕಾರ ಯುವನಿಧಿ ಫಲಾನುಭವಿಗಳಿಗೆ ಸ್ಮಾರ್ಟ್‌ಕಾರ್ಡ್ ಕೂಡ ನೀಡಲಿದೆ ಎಂದರು.
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ಜನಪರವಾಗಿರುವ ಯುವನಿಧಿ ಕಾರ್ಯಕ್ರಮದ ಯಶಸ್ವಿಗೆ ಯುವ ಸಮೂಹ ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಪ್ರಮುಖರಾದ ಆರ್.ಎಂ.ಮಂಜುನಾಥಗೌಡ, ಎಂ.ಶ್ರೀಕಾಂತ್, ಎಚ್.ಸಿ.ಯೋಗೇಶ್, ಅನಿತಾ ಕುಮಾರಿ, ಎನ್.ರಮೇಶ್, ಎಸ್.ರವಿಕುಮಾರ್ ಮತ್ತಿತರರಿದ್ದರು.