

ಶಿವಮೊಗ್ಗ: ಯುವಜನರು ಉದ್ಯೋಗ ಪಡೆಯಲು ಆರ್ಥಿಕ ಸಹಕಾರ ಒದಗಿಸುವ ಒಂದು ಅತ್ಯುತ್ತಮ ಯೋಜನೆ ಯುವನಿಧಿ. ಪದವಿ, ಡಿಪ್ಲೊಮಾ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಹೇಳಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆಶ್ರಯದಲ್ಲಿ ಯುವನಿಧಿ ನೋಂದಣಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಜನರ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವುದಷ್ಟೇ ಉದ್ದೇಶವಲ್ಲ. ಹಲವಾರು ಆರ್ಥಿಕ, ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿರುವ ಯುವಜನರಿಗೆ ಆತ್ಮವಿಶ್ವಾಸ ತುಂಬುವುದಾಗಿದೆ. ವಿದ್ಯಾರ್ಹತೆಗೆ ತಕ್ಕ ಕೌಶಲ ಪಡೆದುಕೊಳ್ಳಲು ಸಹ ಸರ್ಕಾರ ನೆರವಾಗುತ್ತಿದೆ ಎಂದರು. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ಮಧು ಮಾತನಾಡಿ, ಯುವಜನತೆ ಭವಿಷ್ಯಕ್ಕೊಂದು ಉತ್ತಮ ಯೋಜನೆ ಯುವನಿಧಿ. ಪದವಿ ಮುಗಿದ ಕೂಡಲೇ ನೋಂದಣಿ ಮಾಡಿಕೊಳ್ಳುವ ಮೂಲಕ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್ ಖಾನ್ ಮಾತನಾಡಿ, ಸ್ನಾತಕೋತ್ತರ ಪದವಿ ಮುಗಿಸಿದವರು ಸಹ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗೆ ಸಂಬಂಧಿಸಿ ತಾಂತ್ರಿಕ ಸಮಸ್ಯೆ, ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಟೋಲ್‌ಫ್ರೀ ಸಹಾಯ ವಾಣಿ ಸಂಖ್ಯೆ 1800 599 7154ಗೆ ಕರೆ ಮಾಡಬಹುದು ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಜಿ.ಬಿ.ಚನ್ನಪ್ಪ, ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪಾಂಡುರಂಗ ಉಪಸ್ಥಿತರಿದ್ದರು.
ಯುವನಿಧಿ ಯೋಜನೆಗೆ ಆದಾಯ ಮಿತಿ, ಜಾತಿ, ಧರ್ಮದ ಮಿತಿ ಇಲ್ಲ. ಯಾವುದೇ ದಾಖಲೆಗಳನ್ನು ಸ್ಕಾೃನ್ ಮಾಡುವ ಅವಶ್ಯಕತೆ ಇಲ್ಲ. ಡಿಜಿ ಲಾಕರ್‌ನಲ್ಲಿರುವ ದಾಖಲೆಗಳಿಗೆ ಲಿಂಕ್ ಮಾಡಿದರೆ ಸಾಕು. ಮೊದಲು ಒಂದು ತಿಂಗಳಿಗೊಮ್ಮೆ ಸ್ಥಿತಿಗತಿ ಬಗ್ಗೆ ಸ್ವಯಂ ಘೋಷಣೆ ಮಾಡಬೇಕಿತ್ತು. ಇದೀಗ ಈ ಅವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸಲಾಗಿದೆ. -ಖಲಂದರ್ ಖಾನ್, ಜಿಲ್ಲಾ ಉದ್ಯೋಗಾಧಿಕಾರಿ