

ಎನ್.ಆರ್.ಪುರ: ವಿದ್ಯಾವಂತ ಪದವೀಧರ ನಿರುದ್ಯೋಗಿಗಳಿಗೆ ಯುವನಿಧಿ ವರದಾನವಾಗಿದ್ದು ಎಲ್ಲ ಪದವೀಧರರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಯುವನಿಧಿ ಚಾಲನಾ ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿ, ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಉದ್ಯೋಗ ಲಭಿಸದಿದ್ದರೆ ಆತಂಕ, ಒತ್ತಡಕ್ಕೆ ಒಳಗಾಗುತ್ತಾರೆ. ಪದವಿ ಪೂರ್ಣಗೊಂಡು ಮೂರು ತಿಂಗಳ ನಂತರ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಕಾಲ ಪ್ರತಿ ತಿಂಗಳೂ 3 ಸಾವಿರ ರೂಪಾಯಿಯಂತೆ ಖಾತೆಗೆ ಹಣ ಜಮೆ ಮಾಡಲಾಗುವುದು. ಇದನ್ನು ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು, ಹುದ್ದೆಗಳಿಗೆ ಅರ್ಜಿ ಹಾಕಬೇಕು. ಇದು ಯುವಜನರಿಗೆ ಶಕ್ತಿ ತುಂಬುವ ಕಾರ್ಯಕ್ರಮವಾಗಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುವ ಯೋಜನೆ ಜಾರಿಗೆ ತಂದಿದ್ದರು. ನಂತರ ಬಂದ ಸರ್ಕಾರಗಳು ಈ ಯೋಜನೆ ಕೈಬಿಟ್ಟಿವೆ. ಈಗ ಸಿದ್ದರಾಮಯ್ಯ ಸರ್ಕಾರ ಪುನಃ ಟ್ಯಾಬ್ ಕೊಡುವ ಯೋಜನೆ ಜಾರಿಗೆ ತಂದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ಹೇಳಿದರು.
ಪ್ರಾಚಾರ್ಯ ಧನಂಜಯ, ಮೆಣಸೂರು ಗ್ರಾಪಂ ಸದಸ್ಯ ಬಿನು, ಕಾಂಗ್ರೆಸ್ ಮುಖಂಡ ಕಾಫಿ ಗಿರೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಸಹಾಯಕ ಪ್ರಾಧ್ಯಾಪಕರಾದ ನಾಗೇಶ್ ಗೌಡ, ಲಕ್ಷ್ಮಣ ನಾಯಕ್, ಮಂಜುನಾಥ್ ನಾಯಕ್, ರಾಘವೇಂದ್ರ, ವಿಶ್ವನಾಥ್, ದಿನಕರ್, ಸತೀಶ್, ಪ್ರಸಾದ್, ರುಖಿಯತ್, ರೂಪಾ, ಮಂಜುಳಾ ಇದ್ದರು.