ಮೂಡುಬಿದಿರೆ: ಮಡಿಕೇರಿಯ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂಟಿ ಮಹಿಳೆ ಹತ್ಯೆ ಪ್ರಕರಣದ ಆರೋಪಿ, ಮೂಡುಬಿದಿರೆಯ ಯುವಕನನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ನಗರದ ಖಾಸಗಿ ರೆಸಾರ್ಟಿನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯ ತಂಡ ಕೆಲಸ ನಿರ್ವಹಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಹೊಸಬೆಟ್ಟು ನಿವಾಸಿ ಅನಿಲ್ ಬಂಧಿತ ಆರೋಪಿ. ಈತ ಮಡಿಕೇರಿಯಲ್ಲಿ ಖಾಸಗಿ ರೆಸಾರ್ಟ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ.
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ನಿಡುಗಣೆ ಗ್ರಾಮದ ಮಹೀಂದ್ರಾ ರೆಸಾರ್ಟ್ ಸಮೀಪ ಸ್ವಂತ ಮನೆಯಲ್ಲಿ ವಾಸವಿದ್ದ ಸುಮಾರು 70 ವರ್ಷದ ಒಂಟಿ ಮಹಿಳೆ ಲಲಿತಾ ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಲಾಗಿತ್ತು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಗೆ ಡಿಸಿಐಬಿ ಹಾಗೂ ಮಡಿಕೇರಿ, ಪೊಲೀಸ್ ಉಪವಿಭಾಗದ ವ್ಯಾಪ್ತಿಗೊಳಪಡುವ ಠಾಣೆಗಳಿಂದ ನುರಿತ ಅಧಿಕಾರಿ ಹಾಗೂ ಸಿಬ್ಬಂದಿ ತಂಡ ರಚಿಸಲಾಗಿತ್ತು. ಪ್ರಾಥಮಿಕ ತನಿಖಾ ಹಂತದಲ್ಲಿ ಯಾವುದೇ ಸುಳಿವು ದೊರೆಯದೆ ಇದ್ದಿದ್ದರಿಂದ ಪೊಲೀಸ್ ಇಲಾಖೆಗೆ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ಬಳಿಕ ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದ ಇನ್‌ಸ್ಪೆಕ್ಟರ್ ರವಿಕಿರಣ್ ನೇತೃತ್ವದ ತಂಡ ಆರೋಪಿ ಅನಿಲ್‌ನನ್ನು ಬಂಧಿಸಿದೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು ಲಲಿತಾ ಅವರ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿ ಚಿನ್ನಾಭರಣ ಹಾಗೂ ನಗದನ್ನು ದೋಚಿರುವುದನ್ನು ದೃಢಪಡಿಸಿದ್ದಾನೆ.
ಆರೋಪಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಈತ ಮೂಡುಬಿದಿರೆ ಹಾಗೂ ಮಂಗಳೂರಿನಲ್ಲಿ ಮಾರಾಟ ಮಾಡಿದ ಸುಮಾರು 2.80 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ಹಾಗೂ ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.