

ಹುಬ್ಬಳ್ಳಿ: ಇಲ್ಲಿಯ ಯೂಥ್ ಫಾರ್ ಸೇವಾ ಸಂಸ್ಥೆ ವತಿಯಿಂದ ಭಾನುವಾರ ನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಟೆಕ್ ಆಡಿಟೋರಿಯಂನಲ್ಲಿ ಏರ್ಪಡಿಸಿದ್ದ ಸೇವಾ ಸಂಭ್ರಮ ಸಮಾರಂಭದಲ್ಲಿ ಸ್ವಯಂ ಸೇವಕರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಅತಿಥಿಯಾಗಿದ್ದ ಐಐಐಟಿ ನಿರ್ದೇಶಕ ಪ್ರೊ. ಎಸ್.ಆರ್. ಮಹಾದೇವಪ್ರಸನ್ನ, ಸಮಾಜದ ಋಣವನ್ನು ತೀರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸೇವಾ ಕಾರ್ಯಗಳನ್ನು ಮಾಡಬೇಕು. ಎಲ್ಲರನ್ನೂ ಜೋಡಿಸುವಂತಹ ಕಾರ್ಯಕ್ಕೆ ಶ್ರಮ ವಹಿಸಬೇಕು ಎಂದರು.
ಯುನೈಟೆಡ್ ಸೆಕ್ಯೂರಿಟಿ ಫೋರ್ಸ್ ಎಂಡಿ ಸಂತೋಷ ಇಂಚಲ್, ಜೀವನದಲ್ಲಿ ತ್ಯಾಗ ಮತ್ತು ಸೇವೆ ಬಹಳ ಮುಖ್ಯ. ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವುದು ಎಲ್ಲರ ಕರ್ತವ್ಯವೆಂದು ಭಾವಿಸಬೇಕು ಎಂದರು.
ಯೂಥ್ ಫಾರ್ ಸೇವಾ ಯೋಜನಾ ನಿರ್ದೇಶಕ ವಿಶ್ವನಾಥ ಶರ್ಮಾ, ಡಾ. ಕೆಎಫ್. ಕಮ್ಮಾರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ವಿವಿ ಡೀನ್ ಡಾ. ಸಂಜಯ್ ಕೋಟಬಾಗಿ ಮಾತನಾಡಿದರು.
ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ವಿವಿಧ ಕಾಲೇಜಿನ 320 ಸ್ವಯಂ ಸೇವಕರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಯೂತ್ ಫಾರ್ ಸೇವಾ ಸಂಸ್ಥೆಯ ಸಂಚಾಲನ ಸಮಿತಿಯ ಸದಸ್ಯರಾದ ಸಂತೋಷ ಪಾಟೀಲ, ಸಂದೀಪ ಬೂದಿಹಾಳ, ಡಾ. ಸುನಿಲ ಗೋಖಲೆ, ವಿಠ್ಠಲ್ ಖಟಾವಕರ್, ಮಾಧುರಿ ಖಟಾವಕರ್, ಪ್ರಕಾಶ ರಾಥೋಡ, ಇತರರು ಇದ್ದರು.