ಧಾರವಾಡ: ಯುವಕರು ದೇಶದ ಶಕ್ತಿ ಮತ್ತು ಭವಿಷ್ಯ. ಸಮಾಜದ ಪ್ರಗತಿ ಯುವ ಪೀಳಿಗೆಯ ಚಿಂತನೆ ಮತ್ತು ನೈತಿಕತೆಗೆ ಅವಲಂಬಿತವಾಗಿದೆ. ಇಂತಹ ಯುವಜನೋತ್ಸವಗಳು ಯುವಕರಲ್ಲಿ ಸ್ಪರ್ಧಾತ್ಮಕ ಮನೋಭಾವ, ಸೃಜನಶೀಲತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ವೇದಿಕೆಗಳಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಜೆ.ಎಸ್.ಎಸ್.ಕಾಲೇಜಿನ ಉತ್ಸವ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಜಿಲ್ಲಾ ಯುವಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾಭ್ಯಾಸದ ಜತೆಗೆ ಕಲೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವುದರಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಯುವಕರು ತಮ್ಮ ಸಮಯ ಮತ್ತು ಶಕ್ತಿ ಸಕಾರಾತ್ಮಕ ದಿಕ್ಕಿನಲ್ಲಿ ಬಳಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮ, ವಿಜ್ಞಾನ ಮತ್ತು ಹೊಸ ಆವಿಷ್ಕಾರಗಳನ್ನು ಸಮಾಜದ ಹಿತಕ್ಕಾಗಿ ಉಪಯೋಗಿಸಬೇಕು ಎಂದರು.
ಹು-ಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಸರ್ಕಾರವು ಯುವಕರ ಬೆಳವಣಿಗೆಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದೆ. ಅವುಗಳ ಕುರಿತು ಅರಿವು ಮೂಡಿಸುವುದು ಈ ಉತ್ಸವದ ಪ್ರಮುಖ ಉದ್ದೇಶ. ಕಲೆ, ಕ್ರೀಡೆ ಮತ್ತು ಸಂಸ್ಕೃತಿಯ ಚಟುವಟಿಕೆಗಳು ಯುವಕರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ಪ್ರತಿಯೊಬ್ಬ ಯುವಕರು ತಮ್ಮ ಸಾಮರ್ಥ್ಯವನ್ನು ಸಮಾಜದ ಹಿತಕ್ಕಾಗಿ ಬಳಸಿಕೊಳ್ಳಬೇಕು ಎಂದರು.
ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರು ತಮ್ಮ ಪ್ರತಿಭೆ ಗುರುತಿಸಿ ಬೆಳೆಸಿಕೊಳ್ಳಲು ಇಂತಹ ಯುವಜನೋತ್ಸವಗಳು ಉತ್ತಮ ವೇದಿಕೆಯಾಗಿವೆ. ಯುವಕರು ತಮ್ಮೊಳಗಿನ ಶಕ್ತಿ ಅರಿತುಕೊಂಡು ಅದನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿದಾಗ ರಾಷ್ಟ್ರೀಯ ಅಭಿವೃದ್ಧಿಗೆ ಪೂರಕವಾದ ಸಬಲೀಕರಣವಾಗುತ್ತದೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, ಜೀವನದಲ್ಲಿ ಸೋಲು-ಗೆಲುವು ಇದ್ದೇ ಇರುತ್ತವೆ. ಆದರೆ ಆ ಸೋಲುಗಳನ್ನು ಸಹ ಸಕಾರಾತ್ಮಕವಾಗಿ ತೆಗೆದುಕೊಂಡಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದರು.
ತಾಪಂ ಕಾರ್ಯ ನಿರ್ವಾಹಕ ಅಽಕಾರಿ ಡಾ.ಗಂಗಾಧರ ಕಂದಕೂರ, ಕವಿವಿ ಎನ್‌ಎಸ್‌ಎಸ್ ಕೋಶದ ಕಾರ್ಯಕ್ರಮ ಸಂಯೋಜಕ ಡಾ.ಎಂ.ಜಿ.ದಳಪತಿ, ಡಾ.ಎಸ್.ಎಂ ಹಿರೇಮಠ ವೇದಿಕೆಯಲ್ಲಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ ಸ್ವಾಗತಿಸಿದರು. ಡಾ.ಜಿನ್ನಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆ-ಕಾಲೇಜಿನ ಪ್ರಾಧ್ಯಾಪಕರು, ಶಿಕ್ಷಕರು, ಎನ್.ಎಸ್.ಎಸ್. ಸ್ವಯಂ ಸೇವಕರು, ಯುವಕ ಯುವತಿ, ಮಂಡಳಗಳ ಸದಸ್ಯರು, ವಿದ್ಯಾರ್ಥಿಗಳು ಇದ್ದರು.