ಯುವಕರ ಬೆಳವಣಿಗೆಗೆ ತಿಪ್ಪಾರೆಡ್ಡಿ ಅಡ್ಡಿ

7063ba93-f399-4aec-b8de-c61ac9338d72-03
Published on

ಚಿತ್ರದುರ್ಗ: ಯುವಕರು ಮುಂದೆ ಬರಬೇಕು ಎನ್ನುವ ಶಾಸಕರು, ಎಲ್ಲವೂ ನನಗೆ ಬೇಕು ಎನ್ನುತ್ತಿರುವಾಗ ಇದು ಹೇಗೆ ಸಾಧ್ಯ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಪ್ರಶ್ನಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರ ಪುತ್ರ ಎಂಬಿಬಿಎಸ್ ಓದಿದ್ದು, ಗುತ್ತಿಗೆದಾರರಾಗಿದ್ದಾರೆ. ಇದು ತಪ್ಪಲ್ಲ, ಆದರೆ, ಬೇರೆ ಯಾರಿಗಾದರೂ ಅವಕಾಶ ನೀಡಿದ್ದರೆ ಆರ್ಥಿಕವಾಗಿ ಸದೃಢರಾಗಲು ಪ್ರಯತ್ನಿಸುತ್ತಿದ್ದರು ಎಂದರು.

ಸಿವಿಲ್ ಇಂಜಿನಿಯರ್ ಓದಿದವರು ಗುತ್ತಿಗೆದಾರರಾಗಿ ವೃತ್ತಿ ಆರಂಭಿಸಿದರೆ, 4 ರಿಂದ 5 ಲಕ್ಷ ರೂ. ಮೊತ್ತದ ಕಾಮಗಾರಿಗಳ ಟೆಂಡರ್ ಪಡೆಯಲು ಅವಕಾಶವಿದೆ. ಆರಂಭದಲ್ಲಿ ಒಂದೆರಡು ಲಕ್ಷದೊಳಗಿನ ಕಾಮಗಾರಿ ಪೂರೈಸಿ ಅದರ ಗುಣಮಟ್ಟ ಪರಿಶೀಲನೆ ನಂತರ ಐದಾರು ಲಕ್ಷ ರೂ. ಗಳ ಕಾಮಗಾರಿ ಪಡೆಯಬೇಕಿದ್ದ ಶಾಸಕರ ಪುತ್ರ ಯಾವುದೇ ಅನುಭವ ಇಲ್ಲದೆಯೆ ಏಕಾಏಕಿ ಇದೇ ಮೊತ್ತದ ಕಾಮಗಾರಿಗಳ ಟೆಂಡರ್ ಪಡೆದಿದ್ದಾರೆ. ಇದು ಪಾರದರ್ಶಕವಾಗಿ ತನಿಖೆಯಾದರೆ, ಪಿಡಬ್ಲುೃಡಿ

ಇಂಜಿನಿಯರ್‌ಗಳು ಅಮಾನತ್ತು ಆಗುವ ಸಾಧ್ಯತೆ ಇದೆ. ಜಿಲ್ಲಾಧಿಕಾರಿ ಅವರು ಈ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಶಾಸಕರ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದ್ದೇನೆ. ಇದು ನನ್ನ ಗುರಿಯಾಗಿದ್ದು, ಯಾವ ತನಿಖೆಗೂ ಒತ್ತಾಯಿಸುವುದಿಲ್ಲ. ಜನತಾ ನ್ಯಾಯಾಲಯದ ಮೇಲೆ ಪ್ರಬಲವಾದ ವಿಶ್ವಾಸವಿದ್ದು, ಅವರ ಮುಂದೆ ಎಲ್ಲ ವಿಷಯವನ್ನು ಬಹಿರಂಗಪಡಿಸುತ್ತೇನೆ ಎಂದರು.

ನಾನೂ ರಾಜಕೀಯಕ್ಕೆ ಬರಲು ತಿಪ್ಪಾರೆಡ್ಡಿ ಕಾರಣರು. ಆದರೆ, ಭ್ರಷ್ಟರು ಎಂದು ಗೊತ್ತಾದ ನಂತರ ದೂರ ಆಗಿದ್ದೇನೆ. 15 ವರ್ಷ ನಗರಸಭೆಯ ಆಡಳಿತ ನಡೆಸಿದ್ದೇನೆ. ಈಗ ಅವರ ಜತೆಯಲ್ಲಿರುವ ಗುತ್ತಿಗೆದಾರರೇ ಈ ಹಿಂದೆ ನನ್ನ ಬಳಿಯೂ ಇದ್ದರು. ಅದರಲ್ಲಿ ಯಾರಾದರೂ ಒಬ್ಬ ಗುತ್ತಿಗೆದಾರ ಕಾಮಗಾರಿಗಳಲ್ಲಿ ಲಂಚ ಪಡೆದಿದ್ದೇನೆ ಎಂದು ಬಹಿರಂಗವಾಗಿ ಹೇಳಲಿ ಮರುಪ್ರಶ್ನಿಸದೆಯೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net