

ಶಿವಮೊಗ್ಗ: ಸ್ವಪ್ರಯತ್ನ ಇಲ್ಲದಿದ್ದರೆ ಉನ್ನತ ಸ್ಥಾನಕ್ಕೇರುವುದು ಕಷ್ಟ. ಯುವ ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಮಾಡಿದ ಅನೇಕರು ಅತ್ಯುನ್ನತ ಜವಾಬ್ದಾರಿ ನಿರ್ವಹಣೆ ಮಾಡಿದ ನಿದರ್ಶನಗಳಿವೆ. ಶಾಸಕ, ವಿಧಾನಪರಿಷತ್ ಸದಸ್ಯ, ಸಚಿವನಾಗುವುದು ಸುಲಭ. ಆದರೆ ನಾಯಕನಾಗುವುದು ಕಷ್ಟದ ಕೆಲಸ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯುವ ಕಾರ್ಯಕರ್ತರ ಕೈನಲ್ಲಿದೆ. ಗೆಲ್ಲುವ ಸಾಮರ್ಥ್ಯವಿರುವ ಕಾರ್ಯಕರ್ತರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾರ್ಗದರ್ಶನದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ನೀಡಿದ್ದ ಭರವಸೆ ಮತ್ತು ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆ ಮೂಲಕ ಕಾಂಗ್ರೆಸ್ ನಿಚ್ಚಳ ಗೆಲುವು ಸಾಧಿಸಿತು. ಇದರಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಶ್ರಮ ದೊಡ್ಡ ಪ್ರಮಾಣದಲ್ಲಿದೆ ಎಂದು ಹೇಳಿದರು.
ರಾಜಕೀಯ ಇಚ್ಛಾಶಕ್ತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬ ಯುವ ಕಾಂಗ್ರೆಸ್ ಕಾರ್ಯಕರ್ತ ಜನರ ಮಧ್ಯೆ ಇರಬೇಕು. ಅವರ ಕಷ್ಟಗಳನ್ನು ಆಲಿಸಿ ಸರ್ಕಾರದ ಮೂಲಕ ಪರಿಹಾರ ಕೊಡಿಸುವ ಕೆಲಸ ಮಾಡಬೇಕು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತನದು ಎಂದರು.
15 ದಿನಕ್ಕೊಮ್ಮೆ ಕಾರ್ಯಕರ್ತರ ಸಭೆ ನಡೆಸಿ, ಜನರ ಸಮಸ್ಯೆಗಳ ಬಗ್ಗೆ ಪರಾಮರ್ಶಿಸಬೇಕು. ಮತದಾರರ ಕಲ್ಯಾಣಕ್ಕೆ ಶ್ರಮಿಸಬೇಕು. ಪಕ್ಷದ ಸಂಘಟನೆ ಬಗ್ಗೆ ಚರ್ಚಿಸಬೇಕು. ಇದನ್ನು ಪ್ರತಿ ಬ್ಲಾಕ್, ತಾಲೂಕು, ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ನಡೆಸಬೇಕು. ಅತ್ಯಂತ ಶಿಸ್ತುಬದ್ಧವಾಗಿ ಕಾರ್ಯಾಚರಣೆ ಹಮ್ಮಿಕೊಳ್ಳುವುದರ ಮೂಲಕ ಪಕ್ಷದ ವರ್ಚಸ್ಸನ್ನು ಇಮ್ಮಡಿಗೊಳಿಸಬೇಕು ಎಂದು ಸೂಚಿಸಿದರು.
ವಿಧಾನ ಪರಿಷತ್ ಸದಸ್ಯರಾದ ಬಲ್ಕಿಷ್‌ಬಾನು, ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ ಗೌಡ, ಉಪಾಧ್ಯಕ್ಷೆ ದಿವ್ಯಾ, ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ಉಪಾಧ್ಯಕ್ಷ ಗಿರೀಶ್, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್(ಧನಿ), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಿರೀಶ್, ಪ್ರಮುಖರಾದ ಮಧುಸೂದನ, ಶಿವಣ್ಣ, ಅಕ್ಷಯ್ ಪಾಟೀಲ್, ಅಭಿಷೇಕ, ಚೇತನ್ ಗೌಡ ಇತರರಿದ್ದರು.