ಯುವ ಕಾಂಗ್ರೆಸ್ ನಾಯಕರು ಲೆಟರ್‌ಹೆಡ್‌ಗೆ ಸೀಮಿತವಾಗದಿರಿ

youth cong
Published on

ಶಿವಮೊಗ್ಗ: ಯುವ ಕಾಂಗ್ರೆಸ್ ಪದಾಧಿಕಾರಿಗಳಾಗಿ ಆಯ್ಕೆಯಾದವರು ವಿಸಿಟಿಂಗ್ ಕಾರ್ಡ್ ಹಾಗೂ ಲೆಟರ್‌ಹೆಡ್‌ಗೆ ಸೀಮಿತವಾಗದೆ ಪಕ್ಷ ಸಂಘಟನೆ ಹಾಗೂ ಜನಪರ ಕಾರ್ಯಗಳತ್ತ ಗಮನಹರಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.

ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಏರ್ಪಡಿಸಿದ್ದ ಯುವ ನಾಯಕತ್ವ ಸಮಾವೇಶ ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಕಾರ್ಯಕ್ರಮ ಅನೇಕ ಯುವಕರಿಗೆ ಸ್ಫೂರ್ತಿಯಾಗಬೇಕು ಎಂದರು.

ಪಕ್ಷದ ನಾಯಕರು ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪರಿಪಾಠವಿತ್ತು. ಈಗ ಚುನಾವಣೆ ಮೂಲಕವೇ ಆಯ್ಕೆ ನಡೆಯುತ್ತಿದೆ. ಚುನಾವಣೆಯಲ್ಲಿ ಗೆದ್ದವರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಈಗ ಪಕ್ಷ ಸಂಘಟನೆಯಲ್ಲೂ ಶಕ್ತಿ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ವಿದ್ಯಾರ್ಥಿ ಘಟಕವೆಂಬುದು ಪಕ್ಷದ ಬೇರಿನಂತೆ. ಅದಕ್ಕೆ ಸರಿಯಾಗಿ ಪೋಷಕಾಂಶಗಳನ್ನು ಹಾಕಿ ನೀರೆರೆದರೆ ಮಾತ್ರ ಉತ್ತಮ ಫಸಲು ಸಾಧ್ಯ. ಹೀಗಾಗಿ ಎನ್‌ಎಸ್‌ಯುಐನಲ್ಲಿ ಇರುವವರು ಹೆಚ್ಚು ಕೆಲಸ ಮಾಡಬೇಕು. ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ಪಕ್ಷಕ್ಕೆ ಸೇವೆ ಸಲ್ಲಿಸಿ ಹಂತ ಹಂತವಾಗಿ ಸ್ಥಾನಮಾನ ಪಡೆದವರು ಸಾಕಷ್ಟು ಮಂದಿ ಕಾಂಗ್ರೆಸ್‌ನಲ್ಲಿದ್ದಾರೆ ಎಂದರು.

ಪಕ್ಷ ಕಟ್ಟುವ ಮುನ್ನ ಯುವಕರ ತಂಡ ಕಟ್ಟಬೇಕು. ಬೂತ್‌ಗಳಲ್ಲಿ ಯುವಕರನ್ನು ಗುರುತಿಸಬೇಕು. ನಮ್ಮನ್ನು ಬೆಂಬಲಿಸಿ ಜತೆಯಾಗಿ ನಾಲ್ಕು ಮಂದಿ ಹಿಂಬಾಲಿಸಿದರೆ ನಾಯಕರಾಗಲು ಸಾಧ್ಯ. ಗ್ರಾಪಂನಿಂದ ಹಿಡಿದು ಯಾವುದಾದರೂ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಾಯಕತ್ವದ ಹಾದಿಯಲ್ಲಿ ಸಾಗಬಹುದು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಮಾವೇಶ ಉದ್ಘಾಟಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಎಂಎಲ್‌ಸಿ ಬಲ್ಕಿಷ್ ಬಾನು, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ ಗೌಡ, ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಪರಿಶಿಷ್ಟ ಜಾತಿ, ಪಂಗಡ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ (ಧನಿ), ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ಜಿಪಂ ಮಾಜಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್, ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೀಶ್, ಸಿ.ಜಿ.ಮಧುಸೂದನ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net