ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ವಿನೂತನ ಪ್ರತಿಭಟನೆ

raichur
raichur
Published on

 ರಾಯಚೂರು ಕೇಂದ್ರ ಸರ್ಕಾರದ ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಎತ್ತಿನ ಬಂಡಿಯಲ್ಲಿ ಕುಳಿತು ವಿನೂತನವಾಗಿ ಶನಿವಾರ ಪ್ರತಿಭಟನೆ ಮಾಡಿದರು.

ಯುವ ಕಾಂಗ್ರೆಸ್ ಕಾರ್ಯಕರ್ತರು ಎತ್ತಿನ ಬಂಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಜೆಪಿ ನಡ್ಡಾ ಅವರ ಮುಖವಾಡ ಧರಿಸಿದ ಕಾರ್ಯಕರ್ತರು ಬಾರಕೋಲ್ ಮೂಲಕ ರೈತನಿಗೆ ಹೊಡೆಯುವಂತೆ ಬಿಂಬಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ 4 ಸಾವಿರ ನೀಡಿ, ರಸಗೊಬ್ಬರ, ಔಷಧಿ, ಮತ್ತು ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡಿ ರೈತರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದೆ ಎಂದು ಕಿಡಿ ಕಾರಿದರು.ಇಫ್ಕೋ 15-15-15 ರಸ ಗೊಬ್ಬರ ಬೆಲೆ ಹಿಂದೆ 1250ರೂ. ಇದ್ದು, ಇದೀಗ 1650 ರೂ. ಹೆಚ್ಚಳ ಮಾಡಲಾಗಿದೆ. ಆರ್‌ಸಿಎಫ್ 15-15-15 ರಸಗೊಬ್ಬರ ಬೆಲೆ 1470 ರಿಂದ 1650ಕ್ಕೆ ಹೆಚ್ಚಿಸಲಾಗಿದೆ, ಇಫ್ಕೋ 10-26-26 ರಸ ಗೊಬ್ಬರ 1470 ರಿಂದ 1725ಕ್ಕೆ ಏರಿಕೆ ಮಾಡಿದೆ, 20-20-0-13 ರಸಗೊಬ್ಬರವು 1250 ರಿಂದ 1300ಕ್ಕೆ ಏರಿಸಿಲಾಗಿದೆ, 20-20-20 ರಸ ಗೊಬ್ಬರ 1020 ರಿಂದ 1360ರೂಗೆ ಏರಿಕೆ ಮಾಡಿದೆ, 12-32-16 ಹೆಸರಿನ ರಸಗೊಬ್ಬರ ಬೆಲೆ 1470 ರಿಂದ 1775 ರೂ.ಗೆ ಹೆಚ್ಚಳ ಮಾಡಿದೆ, ಯೂರಿಯಾ ಬೆಲೆ 266 ರಿಂದ 280ಕ್ಕೆ ಏರಿಕೆ ಮಾಡಿದೆ, ಎಂಓಓ ಪೊಟ್ಯಾಶ್ 1550 ದಿಂದ 1800 ರೂ ಹೆಚ್ಚಳ ಮಾಡಲಾಗಿದೆ ಎಂದು ದೂರಿದರು.

ರೈತರು ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದಾಗಿ ಸಂಕಷ್ಟದಲ್ಲಿದ್ದಾರೆ, ಬೆಳೆಹಾನಿ ಸಾಲ ಮಾಡಿದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಇದೀಗ ರಸಗೊಬ್ಬರ ಬೆಲೆ ಏರಿಕೆ ಮಾಡಿ ರೈತರನ್ನು ದಿವಾಳಿಯನ್ನಾಗಿ ಮಾಡಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಕೇಂದ್ರ ಸರ್ಕಾರ ಈ ಕೂಡಲೇ ರಸಗೊಬ್ಬರ ಬೆಲೆ ಇಳಿಕೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಲಾಗುತ್ತದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮರಿಸ್ವಾಮಿ ಗಟ್ಟುಬಿಚ್ಚಾಲಿ, ರಾಜ್ಯ ಕಾರ್ಯದರ್ಶಿ ಫೈಸಲ್ ಖಾನ್, ಮಹಮದ್ ಶೈಬಾದ್, ಬಿ.ಮಧುಕುಮಾರ, ಕಿಶೋರ, ರಷೀದ್, ಮಹಮದ್ ಅಜ್ಜು, ಎಂಡಿ ರಫಿ, ಅಬ್ದುಲ್ ಗೌಸ್, ಪ್ರತಾಪ್ ರೆಡ್ಡಿ, ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net