ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹ

yuva cong
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹುಬ್ಬಳ್ಳಿಯ ಅಂಬೇಡ್ಕರ್ ಪ್ರತಿಮೆ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರಜ್ವಲ್ ರೇವಣ್ಣ, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೋದಿಜೀ ಹೆಣ್ಣಿಗೆ ಸಾವಿಗಿಂತ ಕ್ರೂರ ಶಿಕ್ಷೆ ಯಾಕೆ? ಶೋಭಾ ಕರಂದ್ಲಾಜೆ ಅವರೇ ಹಾಸನದ ಸ್ತ್ರೀ ಪೀಡಕನ ವಿರುದ್ಧ ಹೋರಾಟ ಯಾವಾಗ ? ಮಹಿಳೆಯರ ಗೌರವ ಕಳೆಯುವುದೇ ಬಿಜೆಪಿ ಮತ್ತು ಅವರ ಮಿತ್ರ ಪಕ್ಷಗಳ ಕೆಲಸವೇ ಎಂಬಿತ್ಯಾದಿ ಬರಹಗಳ ಫಲಕಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಡಿದಿದ್ದರು. ಪ್ರಜ್ವಲ್ ರೇವಣ್ಣ ಪ್ರತಿಕೃತಿ ದಹಿಸಿದರು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮಾತನಾಡಿ, ಬಹಿರಂಗವಾದ ವಿಡಿಯೋದಲ್ಲಿ ಪ್ರಜ್ವಲ್ ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅವರಿಗೆ ಕರ್ನಾಟಕದ ಜನತೆ ತಕ್ಕ ಉತ್ತರ ನೀಡಬೇಕು. ಇಂತಹ ಹೀನ ಕೃತ್ಯವನ್ನು ಕರ್ನಾಟಕದ ಅಕ್ಕ ತಂಗಿಯರು, ಮಹಿಳೆಯರು ಸಹಿಸಬಾರದು. ಮನೆ ಕೆಲಸದವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅವರನ್ನು ಬೆದರಿಸಲಾಗಿದೆ. ಕೈ ಮುಗಿದರೂ ಬಿಡದೇ ಕೃತ್ಯಕ್ಕೆ ಬಳಸಿಕೊಳ್ಳಲಾಗಿದೆ. ಸೂಕ್ತ ತನಿಖೆ ನಡೆಸಿ ಕೂಡಲೇ ಪ್ರಜ್ವಲ್​ನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ, ಶಾಸಕ ಶ್ರೀನಿವಾಸ ಮಾನೆ, ಪಾಲಿಕೆ ಸದಸ್ಯರಾದ ಇಮ್ರಾನ್ ಎಲಿಗಾರ, ಮೊಹಮ್ಮದ್ ಆರೀಫ್ ಭದ್ರಾಪುರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net