

ಕುಶಾಲನಗರ:
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಕೊಡಗಿಗೆ ಆಗಮಿಸಿದ ಮಂಜುನಾಥ್ ಗೌಡ ಅವರನ್ನು ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣ್ಣೀರ ನೇತೃತ್ವದಲ್ಲಿ ಶನಿವಾರ ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಗಡಿಭಾಗದ ಕಾವೇರಿ ಪ್ರತಿಮೆ ಬಳಿ ಜೆ.ಸಿ.ಬಿ ಯಲ್ಲಿ ಹೂ ಮಳೆ ಸುರಿಸಿ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಂತರ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾತನಾಡಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್, ಇದೇ ಮೊದಲ ಬಾರಿಗೆ ಕೊಡಗಿಗೆ ಆಗಮಿಸಿದ್ದು, ಸರ್ಕಾರ ಐದು ಗ್ಯಾರಂಟಿಗಳನ್ನು ಕೊಟ್ಟಿದೆ. ದೇಶದ ಅಭಿವೃದ್ಧಿ, ಕೃಷಿ, ಜಿಡಿಪಿ ಬೆಳವಣಿಗೆಗೆ ಪಕ್ಷ ಅನೇಕ ಕೊಡುಗೆಗಳನ್ನು ನೀಡಿದೆ. ಇದನ್ನು ಪಕ್ಷದ ಯುವಕರು ಬೂತ್ ಮಟ್ಟದಲ್ಲಿ ಮನೆ ಮನೆಗೆ ತಲುಪಿಸಿ ಜನರ ಧ್ವನಿಯಾಗಬೇಕು. ಬೂತ್ ಮಟ್ಟದ ಸಂಘಟನೆಯನ್ನು ಬಲಪಡಿಸುವ ಮಹತ್ವದ ಆಶಯವಿದ್ದು ಯುವ ಶಕ್ತಿ ಎಂಬ ಸದುದ್ದೇಶದೊಂದಿಗೆ ಸಂಘಟನೆಯ ತಳಮಟ್ಟದ ಬಲವರ್ಧನೆಯ ಅಗತ್ಯ ಇದೆ. 2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮೈಸಿ ಕತ್ತಣ್ಣೀರ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜನರ ಬದುಕನ್ನು ಸುಧಾರಿಸಿದೆ. ಕಾಂಗ್ರೆಸ್‌ನ ಜನಪರವಾದ ಕಾರ್ಯಕ್ರಮಗಳ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಮುಂಬರುವ ಸ್ಥಳಿಯ ಚುನಾವಣೆಗಳಲ್ಲಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದರು.
ಈ ಸಂದರ್ಭ ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚಿರಂಜೀವಿ, ಉಪಾಧ್ಯಕ್ಷ ಅರ್ಜುನ್, ಸಚಿನ್, ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಆದಂ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಪ್ರಮುಖರಾದ ನಯಾಜ್, ಅಪ್ಪಣ್ಣ, ರವಿ, ಚರಣ್, ಸಿದ್ದು, ಪ್ರತಾಪ್, ತೇಜು, ನಿತೀಸ್, ಸೋಮಶೇಖರ್ ಮತ್ತಿತರರು ಇದ್ದರು.