ಯುವ ಬ್ರಿಗೇಡ್, ಹಿಂದುಪರ ಸಂಘಟನೆಗಳಿಂದ ವಿವಿಧ ಕಾರ್ಯಕ್ರಮ

22KMD-1
ಕೆ.ಎಂ.ದೊಡ್ಡಿಯ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಯುವ ಬ್ರಿಗೇಡ್ ಮತ್ತು ಹಿಂದುಪರ ಸಂಘಟನೆಗಳ ವತಿಯಿಂದ ಅಯೋಧ್ಯೆ ಹಬ್ಬ ಆಚರಿಸಲಾಯಿತು.
Published on

ಕೆ.ಎಂ.ದೊಡ್ಡಿ: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಲ್ಲಿನ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಯುವ ಬ್ರಿಗೇಡ್ ಮತ್ತು ಹಿಂದುಪರ ಸಂಘಟನೆಗಳ ವತಿಯಿಂದ ವಿವಿಧ ಕಾರ್ಯಕ್ರಮಗಳು ಜರುಗಿದವು.

ಶ್ರೀರಾಮ, ಸೀತಾ ಮತ್ತು ಲಕ್ಷ್ಮಣ ಮೂರ್ತಿ ಮತ್ತು ಅಯೋಧ್ಯೆಯ ರಾಮಮಂದಿರ ಮಾದರಿಯನ್ನು ಭಕ್ತರಿಗೆ ಪ್ರದರ್ಶಿಸಲಾಯಿತು. ಈ ವೇಳೆ ಎರಡು ಎಲ್‌ಇಡಿ ಪರದೆ ಮೇಲೆ ಅಯೋಧ್ಯೆಯಲ್ಲಿ ನಡೆಯುತಿದ್ದ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೂ ಮುನ್ನ ಶ್ರೀರಾಮ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಇರಿಸಿ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಜೈಶ್ರೀರಾಮ್ ಘೋಷಣೆಗಳು ಮುಗಿಲು ಮುಟ್ಟಿದವು.

ಇದೇ ವೇಳೆ ಪೂಜಾ ಕುಣಿತ, ವೀರಗಾಸೆ ಕುಣಿತ ಮತ್ತು ಶ್ರೀ ಹನುಮಂತನ ವೇಷ ಸಾರ್ವಜನಿಕರ ಗಮನ ಸೆಳೆದರೆ, ರಾಜಸ್ಥಾನದ ವಿಷ್ಣು ಸಮಾಜದ ಮಾರ್ವಾಡಿಗಳು ಮೆರವಣಿಗೆಯಲ್ಲಿ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.

ಈ ವೇಳೆ ಹಂಗರಹಳ್ಳಿ ಶ್ರೀ ವಿದ್ಯಾ ಚೌಡೇಶ್ವರಿ ಮಹಾಸಂಸ್ಥಾನ ಮಠದ ಪೀಠಾದ್ಯಕ್ಷ ಶ್ರೀ ಬಾಲಮಂಜುನಾಥ್‌ಸ್ವಾಮಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಶ್ರೀರಾಮ ಮಾರ್ಯದೆ ಪುರುಷ. ರಾಮನಾಮ ಪ್ರತಿಯೊಬ್ಬರೂ ಜಪಿಸಬೇಕು ಎಂದು ಕಿವಿಮಾತು ಹೇಳಿದರು.
ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು. ಬಜರಂಗ ಸೇನೆಯ ಮಂಜುನಾಥ್, ಹಿಂದುಪುರ ಸಂಘಟನೆಯ ಸಿಪಾಯಿ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷೆ ಕೌಶಲ್ಯಾ ಅರ್ಕೇಶ್ ಸೇರಿದಂತೆ ಹಿಂದುಪರ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.

ಪಾನಕ ವಿತರಣೆ: ಶ್ರೀ ಚಾಮುಂಡೆೇಶ್ವರಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗ ಅಯೋಧ್ಯೆಯಲ್ಲಿ ಸ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸಾರ್ವಜನಿಕರಿಗೆ ಪಾನಕ ಮತ್ತು ಮಜ್ಜಿಗೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net