ಮಾ.16ರಂದು ನಮೋ ಭಾರತ ದಿಕ್ಸೂಚಿ ಭಾಷಣ: ಯುವ ಬ್ರಿಗೇಡ್ ಮೈಸೂರು ವಿಭಾಗ ವಿಸ್ತಾರಕ ಪ್ರಮೋದ್ ಮಾಹಿತಿ

Youth Brigade Program mandya
Published on

ಮಂಡ್ಯ: ನಮೋ ಬ್ರಿಗೇಡ್ 2.0 ವತಿಯಿಂದ ಮಾ.16ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ‘ಈಗ ಶುರುವಾಗಿದೆ ಭಾರತದ ಕಾಲ ನಮೋಭಾರತ’ ಕಾರ್ಯಕ್ರಮ ಆಯೋಜಿಸಲಾಗಿದೆ. ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ನಮೋ ಬ್ರಿಗೇಡ್ ಮೈಸೂರು ವಿಭಾಗ ವಿಸ್ತಾರಕ ಪ್ರಮೋದ್ ತಿಳಿಸಿದರು.

ಕಳೆದ ಹತ್ತು ವರ್ಷದಲ್ಲಿ ನರೇಂದ್ರ ಮೋದಿ ವಿಕಾಸದ ಹಬ್ಬವನ್ನೇ ಮಾಡಿದ್ದಾರೆ. ಅಭಿವೃದ್ಧಿಯ ಕಲ್ಪನೆಯನ್ನು ವಿಸ್ತಾರಗೊಳಿಸಿದ್ದಾರೆ. ದೇಶವನ್ನು ಕತ್ತಲೆಯಲ್ಲೇ ಇಟ್ಟಿದ್ದ ಇಂಡಿಕೂಟದವರಿಗೆ ಇದೇ ಸಮಸ್ಯೆಯಾಗಿದೆ. ಮೊದಲೆಲ್ಲ ವಾರಗಟ್ಟಲೆ ಒಂದು ಸಿಲಿಂಡರ್‌ಗೆ ನಿಲ್ಲಬೇಕಿತ್ತು. ಈಗ ಬುಕ್ ಮಾಡಿದರೆ ಎರಡೇ ದಿನದಲ್ಲಿ ಮನೆ ಬಾಗಿಲಿಗೆ ಸಿಲಿಂಡರ್ ಬರುತ್ತಿರುವುದನ್ನು ಜನರು ಮರೆತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅತ್ಯಾಧುನಿಕ ರಸ್ತೆ, ರೈಲು, ಸೋಲಾರ್ ಪಾರ್ಕ್ ಹೊಸ ಭಾರತದ ಗುರುತುಗಳು. ಈಗ ಚಂದ್ರಯಾನ ಯಶಸ್ಸನ್ನು ದೇಶದ ಮನೆ ಮನೆಗಳಲ್ಲಿ ಹಬ್ಬದಂತೆ ಸಂಭ್ರಮಿಸುತ್ತಾರೆ. ಸೈನ್ಯ ಹಾಗೂ ಸೈನಿಕರಿಗೆ ಕಿಂಚಿತ್ತು ಅಪಮಾನವಾದರೂ ಭಾರತೀಯರು ಸಿಡಿದೇಳುತ್ತಾರೆ. ಇದು ಹತ್ತು ವರ್ಷದಲ್ಲಾದ ಬದಲಾವಣೆ. ಇದಕ್ಕೆ ಮೋದಿ ಕಾರಣ. ಜಾತಿ, ಪಂಥ, ಭಾಷೆಯ ಹೆಸರಿನಲ್ಲಿ ಮತ ಕೇಳದೆ ತಾವು ಮಾಡಿರುವ ರಿಪೋರ್ಟ್ ಕಾರ್ಡ್‌ನ್ನು ಮುಂದಿಟ್ಟು ಸಹಕಾರ ಕೇಳಿದ್ದಾರೆ. ಹಾಗಾಗಿ ಅವರ ಕೆಲಸಗಳು ಹೇಳುತ್ತವೆ ಎಂದು ತಿಳಿಸಿದರು.

ಯುವ ಬ್ರಿಗೇಡ್‌ನ ಜಿಲ್ಲಾ ವಿಸ್ತಾರಕ ಯೋಗೇಶ್, ಮುಖಂಡರಾದ ಮಂಜುನಾಥ್, ನವೀನ್ ಪೂಜಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net