ಪುತ್ತೂರು: ನಡೆದುಕೊಂಡು ಮನೆಗೆ ಹೋಗುತ್ತಿದ್ದ ಯುವತಿಗೆ ಸ್ಕೂಟರಿನಲ್ಲಿ ಬಂದ ಯುವಕನೊಬ್ಬ ‘ನನ್ನ ಜತೆ ಬರ್ತಿಯಾ, ಮನೆಗೆ ಡ್ರಾಪ್ ಕೊಡುತ್ತೇನೆ’ ಎಂದು ಹೇಳಿದ್ದು, ಆತನನ್ನು ಯುವತಿ ಕಡೆಯವರು ಹಾಗೂ ಸ್ಥಳೀಯರು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಸಂಪ್ಯ ಪೊಲೀಸರಿಗೊಪ್ಪಿಸಿದ್ದಾರೆ.
ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಸಾಜ ಕ್ರಾಸ್ ಬಳಿ ಗುರುವಾರ ಸಾಯಂಕಾಲ ಬಸ್‌ನಿಂದ ಇಳಿದು ಮನೆಯ ಕಡೆ ತೆರಳುತ್ತಿದ್ದ ಯುವತಿ ಜತೆ ಪರಿಸರದ ಯುವಕನೊಬ್ಬ ಆಕೆಯನ್ನು ತಡೆದು ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ. ಈ ವಿಚಾರವನ್ನು ಯುವತಿ ತನ್ನ ಮನೆಯವರಿಗೆ ತಿಳಿಸಿದ್ದರು. ಯುವಕ ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ ಪನೆತ್ತಡ್ಕ ಎಂಬಲ್ಲಿ ಕೆಟ್ಟು ಹೋಗಿತ್ತು. ಆತ ಸ್ಕೂಟರನ್ನು ಅಲ್ಲೇ ಬಿಟ್ಟು ಮನೆಗೆ ತೆರಳಿದ್ದ. ಶುಕ್ರವಾರ ಬೆಳಗ್ಗೆ ಕೆಟ್ಟು ಹೋಗಿದ್ದ ಸ್ಕೂಟರನ್ನು ರಿಪೇರಿ ಮಾಡಲು ಮೆಕಾನಿಕ್‌ನನ್ನು ಕರೆದುಕೊಂಡು ಪನೆತ್ತಡ್ಕಕ್ಕೆ ಬಂದಿದ್ದ. ಈ ವೇಳೆ ಸ್ಥಳದಲ್ಲಿ ಸೇರಿದ್ದ ಸ್ಥಳೀಯರು ಯುವಕನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಕೆಲವರು ಆತನಿಗೆ ಥಳಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದು, ಯುವತಿ ಕಡೆಯವರು ನಮಗೆ ಪ್ರಕರಣ ದಾಖಲು ಮಾಡುವ ಅಗತ್ಯ ಇರುವುದಿಲ್ಲ ಎಂದು ತಿಳಿಸಿದ ಮೇರೆಗೆ ಯುವಕನಿಗೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಗಿದೆ.