

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿಂದು ಧರ್ಮ ಕುರಿತ ಅವಹೇಳನಕಾರಿ ಸ್ಟೇಟಸ್ ಇಟ್ಟಿದ್ದ ಯುವಕನನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ಕೆಲಗೇರಿ ರಸ್ತೆ ಚೈತನ್ಯ ನಗರ ನಿವಾಸಿ ಸಲೀಂ ಮಮದಾಪುರ್ (35) ಬಂಧಿತ ಯುವಕ. ನಿತ್ಯವೂ ಚೈತನ್ಯ ನಗರದಿಂದ ಜಕಣಿ ಬಾವಿ ಬಳಿಯ ಪ್ರಾರ್ಥನಾ ಮಂದಿರಕ್ಕೆ ಬರುತ್ತಿದ್ದ ಸಲೀಂ, ಗೆಳೆಯರೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ. ಈತ ಹಿಂದು ಧರ್ಮ ಕುರಿತು ಅವಹೇಳನಕಾರಿ ಸ್ಟೇಟಸ್ ಇಟ್ಟುಕೊಂಡಿದ್ದ. ಇದು ಬಜರಂಗದಳದ ಕಾರ್ಯಕರ್ತರಿಗೆ ಗೊತ್ತಾಗಿದೆ. ಈ ವಿಚಾರ ಪೊಲೀಸರಿಗೂ ತಿಳಿದು ಮುನ್ನೆಚ್ಚರಿಕೆ ಕ್ರಮವಾಗಿ ಜಕಣಿ ಬಾವಿ ಬಳಿ ಆತನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದರು.
ಸಲೀಂನನ್ನು ವಶಕ್ಕೆ ಪಡೆದ ಬಳಿಕ ವಿದ್ಯಾಗಿರಿ ಠಾಣೆಯಲ್ಲಿ ಕೆಲ ಹೊತ್ತು ಇಡಲಾಗಿತ್ತು. ಆಗ ಅಲ್ಲಿಗೆ ಆಗಮಿಸಿದ್ದ ಆತನ ಪಾಲಕರು ಹಿಂದು ಪರ ಸಂಘಟನೆ ಕಾರ್ಯಕರ್ತರು ಹಾಗೂ ಪೊಲೀಸರೊಂದಿಗೂ ವಾಗ್ವಾದ ನಡೆಸಿದ್ದಾರೆ. ನಂತರ ಹಿಂದುಪರ ಸಂಘಟನೆ ಕಾರ್ಯಕರ್ತರು ನೀಡಿರುವ ದೂರಿನ ಆಧಾರದ ಮೇಲೆ ಸಲೀಂ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.