

ಮುದ್ದೇಬಿಹಾಳ: ನಾಗಬೇನಾಳ ಗ್ರಾಪಂಗೆ ಹಲವು ವರ್ಷಗಳಿಂದ ತೆರಿಗೆ ತುಂಬದೆ ಕೋಟ್ಯಂತರ ರೂ. ವಂಚಿಸಿರುವ ಮುರ್ಡೇಶ್ವರ ಪವರ್ ಕಾರ್ಪೋರೇಷನ್ ಕಂಪನಿ (ಎಂಪಿಸಿಎಲ್) ವಿರುದ್ಧ ತನಿಖೆ ನಡೆಸಲು ಜಿಪಂ ಸಿಇಒ ಜಿಲ್ಲಾಮಟ್ಟದ ತಂಡ ರಚಿಸಿದ್ದರಿಂದಾಗಿ ಯುವಜನ ಸೇನೆ ಸಂಘಟನೆ ಇಲ್ಲಿನ ತಾಪಂ ಕಚೇರಿ ಮುಂದೆ 5 ದಿನದಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶನಿವಾರ ಅಂತ್ಯಗೊಂಡಿತು.
ತಾಪಂ ಇಒ ಎನ್.ಎಸ್. ಮಸಳಿ ಅವರು ಹೋರಾಟಗಾರರಿಗೆ ಜಿಪಂ ಸಿಇಒ ಅವರು ಆದೇಶಿಸಿರುವ ತಂಡ ರಚನೆ ಪತ್ರ ಹಸ್ತಾಂತರಿಸಿ ಬೇಡಿಕೆ ಈಡೇರಿದ್ದರಿಂದ ಧರಣಿ ಅಂತ್ಯಗೊಳಿಸುವಂತೆ ಮನವಿ ಮಾಡಿದಕ್ಕೆ ಸ್ಪಂದಿಸಿ ಈ ತೀರ್ಮಾನ ಕೈಕೊಳ್ಳಲಾಯಿತು.
ಮಸಳಿಯವರು ಎಲ್ಲರಿಗೂ ಕಬ್ಬಿನ ಹಾಲು ಕುಡಿಸಿ ಧರಣಿ ಅಂತ್ಯಕ್ಕೆ ಸಹಕರಿಸಿದರು. ಇದಕ್ಕೂ ಮುನ್ನ ಧರಣಿ ಸ್ಥಳಕ್ಕೆ ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಪಿಎಸೈ ಸಂಜಯ ತಿಪರಡ್ಡಿ ಭೇಟಿ ನೀಡಿ, ಹೋರಾಟಗಾರರ ಬೇಡಿಕೆ ಆಲಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಅಜೂರ ತನಿಖಾ ತಂಡದ ಮುಖ್ಯಸ್ಥರಾಗಿದ್ದು, ಜಿಪಂ ಸಹಾಯಕ ನಿರ್ದೇಶಕ (ಆಡಳಿತ) ಡಿ.ಬಿ. ಮೇಂದಳೆ, ಪಿಡಿಒ (ಆಡಳಿತ) ಉಮೇಶ ರಾಠೋಡ, ಎಸ್‌ಡಿಸಿ(ಆಡಳಿತ ಶಾಖೆ) ಮಹೇಶ ಮಠಪತಿ, ಜಿಲ್ಲಾ ಯೋಜನಾ ವ್ಯವಸ್ಥಾಪಕ ಅರವಿಂದ ಬಿರಾದಾರ ತಂಡದ ಸದಸ್ಯರಾಗಿದ್ದಾರೆ. 7 ದಿನದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಯುವಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ, ಗಂಗು ಗಂಗನಗೌಡ್ರ, ಶಿವು ವನಕಿಹಾಳ, ತಂಗಡಗಿ ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಮಲ್ಲು ತಳವಾರ ಬಿಜ್ಜೂರ ಇತರರಿದ್ದರು.