ಪಾಶ್ಚಾತ್ಯ ಸಂಗೀತಕ್ಕೆ ಆಕರ್ಷಿತರಾಗುತ್ತಿರುವ ಯುವ ಪೀಳಿಗೆ

31-12-Shiva-6
ರಾಯಚೂರಿನ ಸ್ವರಸಂಗಮ ಸಂಗೀತ ವಿದ್ಯಾಲಯದಲ್ಲಿ ಪಂ.ಸಿದ್ಧರಾಮ ಜಂಬಲದಿನ್ನಿ ಸ್ಮರಣಾರ್ಥ ಶನಿವಾರ ರಾತ್ರಿ ಏರ್ಪಡಿಸಿದ್ದ ಸಂಗೀತ ಸಮ್ಮೇಳನವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಿದರು. ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ರಾಮಣ್ಣ ಹವಳೆ, ಶಾರದಾ ಭರತ್ ಇದ್ದರು.
Published on

ರಾಯಚೂರು: ಪಾಶ್ಚಾತ್ಯರು ನಮ್ಮ ಶಾಸೀಯ ಸಂಗೀತಕ್ಕೆ ಮಾರು ಹೋಗುತ್ತಿದ್ದರೆ, ನಮ್ಮ ಯುವ ಪೀಳಿಗೆ ಪಾಶ್ಚಾತ್ಯ ಸಂಗೀತದತ್ತ ಆಕರ್ಷಿತರಾಗುತ್ತಿರುವುದು ಖೇದನೀಯ ಸಂಗತಿಯಾಗಿದೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಇಂದಿನ ಪೀಳಿಗೆ ಉಳಿಸಿ, ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಸ್ಥಳೀಯ ಸ್ವರ ಸಂಗಮ ಸಂಗೀತ ವಿದ್ಯಾಲಯದಲ್ಲಿ ಪಂ.ಸಿದ್ಧರಾಮ ಜಂಬಲದಿನ್ನಿ ಪುಣ್ಯಸ್ಮರಣೆ ಸ್ಮರಣಾರ್ಥ ಶನಿವಾರ ರಾತ್ರಿ ಏರ್ಪಡಿಸಿದ್ದ ಅಹೋರಾತ್ರಿ ಸಂಗೀತ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಂಗೀತ ಸಾಧನೆಗೆ ಏಕಾಗ್ರ ಚಿತ್ತ ಅಗತ್ಯವಾಗಿದೆ ಎಂದರು.
ಸಂಗೀತ ಭಗವಂತನಿಗೆ ಅರ್ಪಿತವಾದದ್ದು, ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ. ಗುರುಗಳಿಂದ ಕಲಿತಾಗ ಮಾತ್ರ ಸಂಗೀತ ಸಿದ್ಧಿಯಾಗಲು ಸಾಧ್ಯವಾಗಲಿದೆ. ಪಂ.ನರಸಿಂಹಲು ವಡವಾಟಿ ದೇಶ, ವಿದೇಶಗಳಲ್ಲಿಯೂ ತಮ್ಮ ಸಂಗೀತದ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
ವೈದ್ಯ ಡಾ.ರಮೇಶ ಸಾಗರ ಮಾತನಾಡಿ, ಶಿಷ್ಯ ಗುರುವನ್ನು ಮೀರಿಸಿದಾಗ ಮಾತ್ರ ಗುರು ಶ್ರೇಷ್ಠನಾಗುತ್ತಾನೆ. ಅದನ್ನು ವಡವಾಟಿ ಮತ್ತು ಸಿದ್ಧರಾಮ ಜಂಬಲದಿನ್ನಿಯವರ ಗುರುಶಿಷ್ಯ ಪರಂಪರೆಯಲ್ಲಿ ಕಾಣಬಹುದಾಗಿದೆ. ಪಂ.ನರಸಿಂಹಲು ವಡವಾಟಿ ಸಿದ್ದರಾಮ ಜಂಬಲದಿನ್ನಿಯವರ ಹೆಸರನ್ನು ಚಿರಸ್ತಾಯಿಯಾಗಿ ಉಳಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸತತ 35 ವರ್ಷಗಳ ಕಾಲ ಸಂಗೀತ ಸಮ್ಮೇಳನ ನಡೆಸುವುದು ಕಷ್ಟದ ಕೆಲಸ. ತಮ್ಮ ಗುರುಗಳಲ್ಲಿ ಇಟ್ಟುಕೊಂಡ ನಿಷ್ಠೆ, ಭಕ್ತಿಯಿಂದ ವಡವಾಟಿ ತಮ್ಮ ಗುರುಗಳ ಹೆಸರಿನಲ್ಲಿ ಸಂಗೀತ ಸಮ್ಮೇಳನ ನಡೆಸುತ್ತಾ ಬಂದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಗುರು ರಾಮಣ್ಣ ಹವಳೆಯನ್ನು ಸನ್ಮಾನಿಸಿ, ಗೌರವಿಸಲಾಯಿತು. ನಂತರ ಬೆಳಗಾವಿಯ ಸೀಮಾ ಕುಲಕರ್ಣಿ, ಶಾರದಾ ಭರತ್, ಕಲ್ಕತ್ತದ ಕೃಷ್ಣ ಮುಖೇಡ್ಕರ್‌ನಿಂದ ಗಾಯನ, ಬೆಂಗಳೂರಿನ ಸರ್ವಮಂಗಳರಿಂದ ಸಿತಾರ್ ವಾದನ, ಬೆಂಗಳೂರಿನ ತೇಜಶ್ರೀ ಭರತ್, ಕೆ.ಎಲ್.ನರಹರಿರಾವ್‌ರಿಂದ ಕ್ಲಾರಿಯೋನೆಟ್ ವಾದನ ಜರುಗಿತು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಖ್ಯಾತ ಕ್ಲಾರಿಯೋನೆಟ್ ವಾದಕ ಪಂ.ನರಸಿಂಹಲು ವಡವಾಟಿ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ವೈದ್ಯ ಶಿವಪ್ರಸಾದ ಜಂಬಲದಿನ್ನಿ, ಕೆ.ಯೋಗ ರವೀಶ್ ಭರತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net