ಆತ್ಮರಕ್ಷಣೆಗಾಗಿ ಯುವತಿಯರು ಮಾರ್ಷಲ್ ಆರ್ಟ್ ಕಲಿಯಿರಿ: ಕೆ.ಸಿ.ಕಾರ್ಯಪ್ಪ

kodagu vidhyalaya
Published on

ಮಡಿಕೇರಿ: ಯುವತಿಯರು ಆತ್ಮರಕ್ಷಣೆಗಾಗಿ ಮಾರ್ಷಲ್ ಕಲೆಯನ್ನು ಕಲಿಯುವ ಅಗತ್ಯವಿದ್ದು, ಈ ಮೂಲಕ ಸ್ವರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯುವಪೀಳಿಗೆ ಮುಂದಾಗಬೇಕೆಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಕರೆ ನೀಡಿದರು.


ಕೊಡಗು ವಿದ್ಯಾಲಯದಲ್ಲಿ ಆಯೋಜಿತವಾಗಿದ್ದ ಶಿಕ್ಷಣ ಸಂಸ್ಥೆಯ ೪೦ನೇ ಕ್ರೀಡಾದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿರ್ಭತಿಯಿಂದ ಜೀವನ ಸಾಗಿಸಲು ಇಂದಿನ ದಿನಗಳಲ್ಲಿ ಸ್ವರಕ್ಷಣೆಗಾಗಿ ಮಾರ್ಷಲ್ ಕಲೆಯನ್ನು ತಿಳಿದುಕೊಳ್ಳುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಯುವತಿಯರು ಮಾರ್ಷಲ್ ಆರ್ಟ್‌ನಲ್ಲಿ ತರಬೇತಿ ಪಡೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.


ಮಡಿಕೇರಿ ಸೇರಿದಂತೆ ಕೊಡಗಿನ ಪರಿಸರವು ಇತ್ತೀಚಿನ ವರ್ಷಗಳಲ್ಲಿ ಮಾಲಿನ್ಯದಿಂದ ಹಾಳಾಗುತ್ತಿದೆ. ನಿಸರ್ಗ ಸೌಂದರ್ಯಕ್ಕೆ ಹೆಸರಾದ ಮಡಿಕೇರಿ ಕಾಂಕ್ರೀಟ್ ಕಾಡಾಗುತ್ತಿದೆ. ಯುವಜನಾಂಗ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ಹರಿಸಿ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದ ಅವರು, ೨೦೧೮ರಲ್ಲಿ ಸಂಭವಿಸಿದ ಭೂಕುಸಿತ ಖಂಡಿತವಾಗಿಯೂ ದೇವರ ಅಥವಾ ವಿಧಿಯ ಸೃಷ್ಟಿಯಲ್ಲ. ಇದು ಮಾನವನ ದುರಾಸೆಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪವಾಗಿದ್ದು, ಆ ದುರಂತದಿಂದ ನಾವೆಲ್ಲರೂ ಎಚ್ಚರಿಕೆಯ ಪಾಠ ಕಲಿತು ಪ್ರಕೃತ್ತಿ ಸಂರಕ್ಷಣೆಯತ್ತ ಗಮನ ಹರಿಸಲೇಬೇಕಾಗಿದೆ ಎಂದು ಕಿವಿಮಾತು ಹೇಳಿದರು.


ಪ್ರತೀಯೋರ್ವರಿಗೂ ದೇಶ ಮೊದಲ ಪ್ರಾಶಸ್ತ್ಯ ಆಗಿರಬೇಕು. ನಂತರವೇ ತನ್ನ ಸುಖ, ಸಂತೋಷ ಇರಬೇಕು. ದೇಶ ಸುರಕ್ಷಿತವಾಗಿ ಇದ್ದರೆ ಮಾತ್ರ ತನ್ನ ಜೀವನ ಕೂಡ ನೆಮ್ಮದಿಯಿಂದ ಇರಲು ಸಾಧ್ಯ ಎಂಬುದನ್ನು ಯಾರೂ ಮರೆಯಬಾರದು ಎಂದು ಅಭಿಪ್ರಾಯಪಟ್ಟ ಕೆ.ಸಿ.ಕಾರ್ಯಪ್ಪ, ಕೊಡಗು ವಿದ್ಯಾಲಯ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ವಿಚಾರ ತಿಳಿಹೇಳುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.


ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಕೆ.ಎಸ್.ಸುಮಿತ್ರಾ ಮಾತನಾಡಿ, ಸತತ ೧೬ ವರ್ಷಗಳ ಕಾಲ ಶಾಲೆಯು ೧೦ನೇ ತರಗತಿಯಲ್ಲಿ ಶೇ.೧೦೦ರ ಫಲಿತಾಂಶ ಗಳಿಸುತ್ತಾ ಬಂದಿದೆ. ಸಂಸ್ಥೆಯ ೬೦ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿಯ ಸಹಕಾರ ಇದಕ್ಕೆ ಕಾರಣವಾಗಿದೆ ಎಂದು ಸ್ಮರಿಸಿಕೊಂಡರು.


ಕೊಡಗು ವಿದ್ಯಾಲಯದಲ್ಲಿ ೨೮ ವರ್ಷಗಳಿಂದ ಎನ್.ಸಿ.ಸಿ ತರಬೇತುದಾರರಾಗಿರುವ ದಾಮೋದರ್, ಕ್ರೀಡಾ ತರಬೇತುದಾರ ಡಿ.ಜೆ.ದಿನೇಶ್‌ರವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಗಣ್ಯರು ಸನ್ಮಾನಿಸಿ ಗೌರವಿಸಿದರು.


ವೇದಿಕೆಯಲ್ಲಿ ಶಾಲಾ ಕ್ರೀಡಾಸಮಿತಿ ಅಧ್ಯಕ್ಷ ರಘುಮಾದಪ್ಪ, ಶಾಲಾ ನಿರ್ದೇಶಕರಾದ ಉರ್ಮಿಳಾ ಮುದ್ದಯ್ಯ, ಬಿ.ಎಸ್.ಪೂಣಚ್ಚ, ಸಿ.ಎಸ್.ಗುರುದತ್, ನೀತಾದೇವಯ್ಯ, ಆಪರ್ಚ್ಯುನಿಟಿ ಶಾಲೆಯ ಟ್ರಸ್ಟಿ ಮೀನಾ ಕಾರ್ಯಪ್ಪ, ಪ್ರಮುಖರಾದ ವೀಣಾ ಚಂಗಪ್ಪ, ಗೀತಾಶ್ರೀಧರ್, ಕೊಡಗು ವಿದ್ಯಾಲಯದ ಆಡಳಿತ ವ್ಯವಸ್ಥಾಪಕ ಕೆ.ರವಿ ಸೇರಿದಂತೆ ಇತರರಿದ್ದರು.


ಕೊಡಗು ವಿದ್ಯಾಲಯದ ಆಪರ್ಚ್ಯುನಿಟಿ ಶಾಲೆಯ ವಿಶೇಷ ಚೇತನ ಮಕ್ಕಳ ನೃತ್ಯ ಮನಮುಟ್ಟುವಂತಿತ್ತು. ಕೊಡಗು ವಿದ್ಯಾಲಯದ ನೂರಾರು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಾದ್ಯಗೋಷ್ಟಿ, ಪಥಸಂಚಲನ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net