

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿಯ ದೇವಾಲಯದಲ್ಲಿ ಇತ್ತೀಚೆಗೆ ಮದುವೆಯಾಗಿ ನೂತನ ದಾಂಪತ್ಯಕ್ಕೆ ಕಾಲಿರಿಸಿದ್ದ ಹಿಂದು ಯುವಕ ಹಾಗೂ ಮುಸ್ಲಿಂ ಯುವತಿ ಪರಸ್ಪರ ಬೇರ್ಪಟ್ಟಿದ್ದಾರೆ.
ಪರಸ್ಪರ ಎರಡು ವರ್ಷ ಪ್ರೀತಿಸಿಕೊಂಡ ಗ್ರಾಮದ ನಾಗಾರ್ಜುನ (25 ವರ್ಷ) ಹಾಗೂ ಫಸೀಹಾ (23) ಪಾಲಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಇದಕ್ಕೆ ಪೊಲೀಸರು ನಿಯಮಾನುಸಾರ ರಕ್ಷಣೆ ನೀಡಿದ್ದರು. ನೂತನ ದಂಪತಿ ತಂಟೆಗೆ ಹೋಗದಂತೆ ಎರಡು ಕುಟುಂಬಗಳಿಗೆ ಸೂಚಿಸಿದ್ದರು. ಇನ್ನೂ ರಾಜೀ ಸಂಧಾನದ ಮೂಲಕ ಪ್ರೇಮ ವ್ಯವಹಾರಕ್ಕೆ ಅಂತ್ಯವಾಡುವ ದೊಡ್ಡವರ ಕಸರತ್ತು ಯಶಸ್ವಿಯಾಗಿರಲಿಲ್ಲ. ಇದರ ನಡುವೆ ಯುವತಿಯ ತಾಯಿ ಆರೋಗ್ಯ ಹದಗೆಡುತ್ತಿದ್ದು ಮಗಳ ಯೋಚನೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಇದರ ಬಗ್ಗೆ ಮಾಹಿತಿ ಪಡೆದುಕೊಂಡು ಸೀಹಾ ಹೆತ್ತಮ್ಮನ ಆರೋಗ್ಯದ ದೃಷ್ಟಿಯಿಂದ ಮತ್ತೆ ತಾಯಿ ಮನೆಗೆ ವಾಪಸ್ಸಾಗಿದ್ದು ಈ ಬಗ್ಗೆ ಪೊಲೀಸರಿಗೆ ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದಾಳೆ ಎನ್ನಲಾಗಿದೆ.