ಮದುವೆಯಾಗುವುದಾಗಿ ನಂಬಿಸಿ ಯುವತಿ ಅತ್ಯಾಚಾರ, ಡೆಂಟಲ್ ಕ್ಲಿನಿಕ್ ವೈದ್ಯನ ಬಂಧನ

Arrest Kaidhi
Published on

ರಾಣೆಬೆನ್ನೂರ: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಹಾಗೂ ಅದೇ ಯುವತಿ ವೈದ್ಯನಿಗೆ ಹಣ ಕೊಡದಿದ್ದರೆ ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯ ಶಹರ ಪೊಲೀಸರು ಅತ್ಯಾಚಾರದ ಆರೋಪಿಯನ್ನು ಬಂಧಿಸಿದ್ದಾರೆ.
ನಗರದ ಮೇಡ್ಲೇರಿ ರಸ್ತೆಯ ಹಿತ್ತಲಮನಿ ಡೆಂಟಲ್ ಕ್ಲಿನಿಕ್​ನ ಡಾ. ವಿಜಯಕುಮಾರ ರಂಗಪ್ಪ ಹಿತ್ತಲಮನಿ ಬಂಧಿತ ಆರೋಪಿ.


ಈತನ ವಿರುದ್ಧ ನೊಂದ ಯುವತಿ ದೂರು ನೀಡಿದ್ದಳು. ಆದರೆ, ವೈದ್ಯ ಕೂಡ ಯುವತಿ, ಆಕೆಯ ತಾಯಿ ಹಾಗೂ ಜಟ್ಟೆಪ್ಪ ಎಂಬುವನ ವಿರುದ್ಧ ಪ್ರತಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ವೈದ್ಯನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.


ಯುವತಿಯ ದೂರು: ನಾನು 2 ವರ್ಷದಿಂದ ವೈದ್ಯನ ಬಳಿ ಕೆಲಸ ಮಾಡುತ್ತಿದ್ದೆ. ಈತ ಬಲವಂತವಾಗಿ ನನ್ನನ್ನು ರಾತ್ರಿ ಉಳಿಸಿಕೊಂಡು ಸಂಭೋಗ ಮಾಡಿ ಮದುವೆಯಾಗುವುದಾಗಿ ನಂಬಿಸಿ ಎರಡು ಬಾರಿ ಗರ್ಭವತಿಯಾಗುವಂತೆ ಮಾಡಿದ್ದ. ನನ್ನ ವಿರೋಧದ ನಡುವೆ ಗರ್ಭಪಾತ ಮಾಡಿಸಿದ್ದು, ಈವರೆಗೂ ಮದುವೆಯಾಗದೆ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ.
ವೈದ್ಯನ ದೂರು: ಯುವತಿಯು ಕೆಲಸಕ್ಕೆ ಬಂದಾಗ ಆಕೆಯ ತಾಯಿ ಹಾಗೂ ಜಟ್ಟೆಪ್ಪ ಸೇರಿ ನಮಗೆ ಹಣದ ಸಮಸ್ಯೆಯಿದೆ ಎಂದು ಹೇಳಿ ನನ್ನಿಂದ ಹಣ ಪಡೆದುಕೊಂಡಿದ್ದರು. ಇದಾದ ಬಳಿಕ ಯುವತಿ ಸರಿಯಾಗಿ ಕೆಲಸಕ್ಕೆ ಬಾರದೆ ಇದ್ದಿದ್ದರಿಂದ ನೀನು ಇನ್ಮುಂದೆ ಕೆಲಸ ಮಾಡುವುದು ಬೇಡ ಎಂದು ಹೇಳಿದ್ದೆ. ಇದಕ್ಕೆ ಯುವತಿಯು ನಾನು ನಿನ್ನನ್ನು ಪ್ರೀತಿ ಮಾಡುತ್ತಿದ್ದೇನೆ. ನೀನು ಪ್ರೀತಿ ಮಾಡದೆ ಹೋದರೆ ನೀನು ನನ್ನನ್ನು ದೈಹಿಕವಾಗಿ ಬಳಸಿಕೊಂಡು ಬಿಟ್ಟಿದ್ದೀಯಾ ಅಂತಾ ಕೇಸು ದಾಖಲಿಸುತ್ತೇನೆ. ನಿಮ್ಮ ಗೌರವ ಹಾಳು ಮಾಡುತ್ತೇನೆ. ಹಣ ಕೊಡದೆ ಹೋದರೆ ನಿಮ್ಮನ್ನು ಕೊಲೆ ಮಾಡಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ್ದಾಳೆ. ಜತೆಗೆ ನನ್ನ ಕಡೆಯಿಂದ ಮೋಸದಿಂದ ಹಣ ಪಡೆದುಕೊಂಡಿದ್ದಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾನೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಎರಡೂ ಪ್ರಕರಣ ದಾಖಲಾಗಿದ್ದವು. ತನಿಖೆ ಕೈಗೊಂಡ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net