ಮಂಡ್ಯ: ನಗರದ ರೈಲು ನಿಲ್ದಾಣದ ರೈಲ್ವೆ ಮೇಲ್ಸೇತುವೆ ಬಳಿ ಗುರುವಾರ ಬೆಳಗ್ಗೆ ಹಳಿ ದಾಟುತ್ತಿದ್ದ ಯುವತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾಳೆ.
ಇಲ್ಲಿನ ಸ್ವರ್ಣಸಂದ್ರ ನಿವಾಸಿ ಡಿ.ನರಸಿಂಹಮೂರ್ತಿ ಎಂಬುವರ ಪುತ್ರಿ ರಮ್ಯಾ(೨೪) ಮೃತ ಯುವತಿ. ಎಂಕಾಂನಲ್ಲಿ ಚಿನ್ನದ ಪದಕ ಪಡೆದಿದ್ದ ಈಕೆ, ಕಳೆದ ೧೦ ತಿಂಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ತರಬೇತಿ ಪಡೆಯುತ್ತಿದ್ದರು. ಇದಕ್ಕಾಗಿ ಪ್ರತಿದಿನ ತಂದೆಯೊಂದಿಗೆ ಬೆಂಗಳೂರಿಗೆ ಹೋಗುತ್ತಿದ್ದರು.
ಗುರುವಾರ ನರಸಿಂಹಮೂರ್ತಿ ಅವರ ಪುತ್ರ ಬೈಕ್‌ನಲ್ಲಿ ಮೊದಲು ತಂದೆಯನ್ನು ಮನೆಯಿಂದ ರೈಲು ನಿಲ್ದಾಣಕ್ಕೆ ಕರೆತಂದು ಬಿಟ್ಟಿದ್ದಾನೆ. ಬಳಿಕ ಮನೆಗೆ ಹೋಗಿ ರಮ್ಯಾ ಅವರನ್ನು ರೈಲು ನಿಲ್ದಾಣಕ್ಕೆ ಕರೆತಂದಿದ್ದಾನೆ. ಅಷ್ಟರ ವೇಳೆ ನರಸಿಂಹಮೂರ್ತಿ ಅವರು ಬೆಂಗಳೂರಿಗೆ ತೆರಳುವ ಸಲುವಾಗಿ ೮ ಗಂಟೆ ವೇಳೆಗೆ ವಾರಾಣಾಸಿ ಎಕ್ಸ್ ಪ್ರೆಸ್ ಬರುತ್ತಿದ್ದ ೩ನೇ ಪ್ಲಾಟ್ ಫಾರ್ಮ್‌ಗೆ ಹೋಗಿ ನಿಂತಿದ್ದಾರೆ.
ರಮ್ಯಾ ಕೂಡ ೩ನೇ ಪ್ಲಾಟ್ ಫಾರ್ಮ್‌ಗೆ ಹೋಗುವ ಸಲುವಾಗಿ ರೈಲ್ವೆ ಮೇಲ್ಸೇತುವೆ ಸಮೀಪ ರೈಲು ಹಳಿಯನ್ನು ದಾಟುವ ಪ್ರಯತ್ನದಲ್ಲಿದ್ದಾಗ ೭.೪೫ರ ಸಮಯದಲ್ಲಿ ೨ನೇ ಪ್ಲಾಟ್ ಫಾರ್ಮ್ ನಲ್ಲಿ ಬೆಂಗಳೂರು ಕಡೆಯಿಂದ ಬಂದ ಹಂಪಿ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿದ್ದಾರೆ. ಇದರಿಂದ ರಮ್ಯಾ ಅವರ ದೇಹ ಛಿದ್ರಛಿದ್ರವಾಗಿದೆ. ನರಸಿಂಹಮೂರ್ತಿ ಅವರು ರೋಧಿಸುತ್ತಿದ್ದ ಅಲ್ಲಿದ್ದ ಜನರು ಹೃದಯವಿದ್ರಾವಕ ಘಟನೆ ಕಂಡು ಮರುಗುತ್ತಿದ್ದರು.
ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಛಿದ್ರವಾಗಿದ್ದ ರಮ್ಯಾ ಅವರ ದೇಹದ ಭಾಗಗಳನ್ನು ಸಂಗ್ರಹಿಸಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿನ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ನೀಡಲಾಗಿದೆ. ಮೈಸೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.