ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ನ್ಯೂ ಟೌನ್‌ನಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ನಿವಾಸಿ ಮೇಘನಾ (25) ಮೃತೆ.
ಮೇಘನಾ ಕೆಲಸದ ನಿಮಿತ್ತ ಬೆಂಗಳೂರಿನ ಪಿಜಿಯಲ್ಲಿ ವಾಸವಾಗಿದ್ದು, ಗುರುವಾರ ನಗರದ ನ್ಯೂ ಟೌನ್ ಬಡಾವಣೆ ನಿವಾಸಿ ಸ್ನೇಹಿತ ಸತೀಶ್ ಮನೆಗೆ ಬಂದಿದ್ದಳು. ಶುಕ್ರವಾರ ಬೆಳಗ್ಗೆ ಸ್ನಾನ ಮಾಡಲು ತೆರಳಿದ್ದಾಗ ಗ್ಯಾಸ್ ಗೀಸರ್ ಸೋರಿಕೆಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ರವಾನಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ನಿಶ್ಚಿತಾರ್ಥ: ಮೇಘನಾ ಹಾಗೂ ಸ್ನೇಹಿತ ಸತೀಶ್ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಗೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದರು. ನಿಶ್ಚಿತಾರ್ಥಕ್ಕೆ ಸಿದ್ಧತೆ ಕೂಡ ನಡೆದಿತ್ತು ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.