ಫೆ.27ರಂದು ಯುವ ವೈಜ್ಞಾನಿಕ ಅಧಿವೇಶನ: ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ಸಿ.ಶಿವಲಿಂಗಯ್ಯ ಹೇಳಿಕೆ

Young Scientific Session mandya
Published on

ಮಂಡ್ಯ: ರಾಷ್ಟ್ರಕವಿ ಕುವೆಂಪು ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಭಾಷಣದ 50ನೇ ವರ್ಷಾಚರಣೆ ಅಂಗವಾಗಿ ಫೆ.27ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಮಟ್ಟದ ಪ್ರಥಮ ಯುವ ವೈಜ್ಞಾನಿಕ ಸಂಸತ್ ಅಧಿವೇಶನ ಆಯೋಜಿಸಲಾಗಿದೆ ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಜಿಲ್ಲಾಧ್ಯಕ್ಷ ಸಿ.ಶಿವಲಿಂಗಯ್ಯ ಹೇಳಿದರು.

ನಮ್ಮ ನಡಿಗೆ ವಿಜ್ಞಾನದೆಡೆಗೆ ಘೋಷವಾಕ್ಯದೊಂದಿಗೆ ಆಯೋಜಿಸಿರುವ ಅಧಿವೇಶನದ ಅಂಗವಾಗಿ ಅಂದು ಬೆಳಗ್ಗೆ 9.45ಕ್ಕೆ ರೈತ ಸಭಾಂಗಣದ ಆವರಣದಲ್ಲಿರುವ ಕುವೆಂಪು ಪ್ರತಿಮೆಯಿಂದ ಅಂಬೇಡ್ಕರ್ ಭವನದವರೆಗೆ ವಿಜ್ಞಾನ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಎನ್.ಯತೀಶ್ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಚಾಲನೆ ನೀಡಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 10.30ಕ್ಕೆ ಅಕ್ಕಮಹಾದೇವಿ ಮಹಿಳಾ ವಿವಿಯ ವಿಶ್ರಾಂತ ಕುಲಪತಿ ಡಾ.ಸಭೀಹಾ ಭೂಮಿಗೌಡ ಅಧಿವೇಶನ ಉದ್ಘಾಟಿಸಲಿದ್ದು, ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜು ಅಧ್ಯಕ್ಷತೆ ವಹಿಸಲಿದ್ದಾರೆ. 11.45ಕ್ಕೆ ಮೊದಲ ಗೋಷ್ಠಿಯಲ್ಲಿ ‘ಕುವೆಂಪು ಸಂದೇಶಗಳಿಂದ ಉಂಟಾದ ಸಾಮಾಜಿಕ ಬದಲಾವಣೆ’ ಕುರಿತು ವೈಚಾರಿಕ ಚಿಂತಕ ತುಕಾರಾಂ ವಿಷಯ ಮಂಡಿಸಲಿದ್ದಾರೆ. ಪರಿಷತ್‌ನ ರಾಜ್ಯ ಉಪಾಧ್ಯಕ್ಷ ಡಾ.ಯಮದೂರು ಸಿದ್ದರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 2ಗಂಟೆಗೆ ಎರಡನೇ ಗೋಷ್ಠಿಯಲ್ಲಿ ‘ಯುವ ಜನತೆಗೆ ಸಂವಿಧಾನ ಆಶಯಗಳ ಪ್ರಸ್ತುತತೆ’ ಕುರಿತು ಬೆಂಗಳೂರು ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಅಭಿದಾ ಬೇಗಂ ವಿಷಯ ಮಂಡಿಸಲಿದ್ದು, ಪರಿಷತ್‌ನ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜು ಅಧ್ಯಕ್ಷತೆ ವಹಿಸಲಿದ್ದಾರೆ. 3ಗಂಟೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದವಿರಲಿದೆ. ಸಂಜೆ 4.15ಕ್ಕೆ ಪರಿಷತ್‌ನ ಜಿಲ್ಲಾಧ್ಯಕ್ಷ ಸಿ.ಶಿವಲಿಂಗಯ್ಯ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಚಿಂತಕ ಡಾ.ವಾಸು ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.

ಪರಿಷತ್‌ನ ಗುರುಮೂರ್ತಿ, ಪುಷ್ಪಲತಾ, ಎಂ.ವಿನಯ್‌ಕುಮಾರ್, ಜಯರಾಮು, ಅಭಿಗೌಡ ಹನಕೆರೆ, ಕೆ.ವಿ.ವೆಂಕಟಾಚಲಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net