ಯುವ ಸಂಶೋಧಕರಿಂದ ಉತ್ತಮ ಸಂಶೋಧನೆಯಾಗಲಿ

IMG-20251016-WA0007.jpg
Published on
ಧಾರವಾಡ: ಯುವ ಸಂಶೋಧಕರು ಇನ್ನಷ್ಟು ಉತ್ತಮ ಸಂಶೋಧನೆಗಳನ್ನು ಮಾಡುತ್ತಲೇ ಇರಬೇಕು. ಆದರೆ, ಸಂಶೋಧನೆ ಲಾಭದಾಯಕವಾಗುತ್ತದೆ ಎಂಬ ಬಗ್ಗೆ ಒಂದಿಷ್ಟು ಕಾಯಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದರು.
ಇಲ್ಲಿನ ಧಾರವಾಡ ಐಐಟಿ ಯಲ್ಲಿ ಎಂಪಿ ಲಾಡ್ ಯೋಜನೆಯಲ್ಲಿ ನಿರ್ಮಾಣಗೊಂಡ ನೂತನ ಇನ್ ಕ್ಯೂಬೇಟರ್ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಸಂಶೋಧನೆಗಳು ನಿರಂತರವಾಗಿ ನಡೆಯಲಿ. ಇಂತಹ ಇನ್ ಕ್ಯುಬೆಟರ್ ಕೇಂದ್ರಗಳು ಇದಕ್ಕೆ ಪೂರಕವಾಗಿ ಸಹಾಯ ಮಾಡುತ್ತವೆ. ಯಾವುದೇ ಕಾರಣಕ್ಕೂ ನಿರಾಶೆಯಾಗದೆ ಸಮಾಜಕ್ಕೆ ಉತ್ತಮ ಕೊಡುಗೆ ಕೊಡುವುದಕ್ಕೆ ಸಜ್ಜಾಗಬೇಕು. ಸಂಶೋಧಕರು ಸಂಶೋಧನೆ ಮಾಡಲಿ. ಆ ಸಂಶೋಧನೆಗಳನ್ನು ಲಾಭದಾಯಕಗೊಳಿಸಲು ಬೇರೆಯವರು ಇರುತ್ತಾರೆ. ಇದೆಲ್ಲದಕ್ಕೂ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದರು. ಭಾರತ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಹೂಡಿಕೆ ಮಾಡಿದೆ. ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ಸಿಕ್ಕಬೇಕಿದೆ. ಇಂದು ದೇಶದ ಆರ್ಥಿಕತೆಯನ್ನು ಕಟ್ಟುತ್ತಿದ್ದು, ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೂ ಅವಕಾಶ ನೀಡಲಾಗಿದೆ. ಪ್ರತಿಭೆ ಮತ್ತು ಉದ್ಯೋಗ ಅವಕಾಶಕ್ಕೆ ಸದ್ಯಕ್ಕೆ ದೇಶದಲ್ಲಿ ಉತ್ತಮ ವಾತಾವರಣವಿದೆ ಎಂದರು.

ಭಾಷೆಯೇ ಉದ್ಯೋಗದ ಸೂತ್ರ : ವಿಶ್ವವಿದ್ಯಾಲಯಗಳಲ್ಲಿ ಓದಿದ ಎಲ್ಲರಿಗೂ ಉದ್ಯೊಗಾವಕಾಶಗಳು ಇರಬಹುದು. ಆದರೆ ಆ ಉದ್ಯೋಗಕ್ಕೆ ತಕ್ಕಂತ ಕೌಶಲ್ಯವನ್ನು ವಿದ್ಯಾರ್ಥಿಗಳು ವೃದ್ಧಿಸಿಕೊಳ್ಳಬೇಕು. ಕಂಪನಿಗಳು ಅವರ ಉತ್ಪಾದನೆ ಮತ್ತು ಉದ್ಯೋಗಕ್ಕೆ ತಕ್ಕಂತಹ ಪ್ರತಿಭೆಗಳನ್ನು ಹುಡುಕುತ್ತಲೇ ಇರುತ್ತಾರೆ. ಭಾಷೆ ಇಂದು ಉದ್ಯೋಗ ಪಡೆದುಕೊಳ್ಳುವ ಹೊಸ ಅವಕಾಶಗಳನ್ನು ಸೃಷ್ಠಿಸಿಕೊಟ್ಟಿದೆ. ವಿದೇಶಿ ಭಾಷೆ ಕಲಿತರೆ ಅಲ್ಲಿಗೆ ಹೋಗಿ ಉದ್ಯೋಗ ಮಾಡಲು ಅವಕಾಶವಿದೆ. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತ ಕೌಶಲ್ಯವನ್ನು ವಿಶ್ವವಿದ್ಯಾಲಯಗಳು ಕಲಿಸಬೇಕು ಎಂದು ಸಚಿವೆ ಸೀತಾರಾಮನ್ ಮನವಿ ಮಾಡಿದರು. ಶೂನ್ಯ ಮಾಲಿನ್ಯ:

ಪರಿಸರದ ರಕ್ಷಣೆ ಮತ್ತು ಅಭಿವೃದ್ಧಿ ಒಟ್ಟೊಟ್ಟಿಗೆ ಸಾಗಬೇಕು. ವಿಕಸಿತ ಭಾರತದ ಕನಸು ಸುಂದರ ಪರಿಸರದೊಂದಿಗೆ ಸಕಾರಗೊಳ್ಳಬೇಕಾಗಿದೆ. ಉತ್ಪಾದನೆ ಮಾಡುವ ಘಟಕಗಳಲ್ಲಿ ಪರಿಸರ ರಕ್ಷಣೆಯ ಸೂತ್ರಗಳು ಸೂಕ್ಷ್ಮವಾಗಿ ಅಳವಡಿಕೆಯಾಗಬೇಕಿದೆ ಎಂದರು. ಡಿಜಿಟಲ್ ಮೂಲ ಸೌಕರ್ಯಗಳನ್ನು ವೃದ್ಧಿಸಬೇಕಾಗಿದೆ. ಸಾರ್ವಜನಿಕ ಹಣದಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಅದೇ ಸಮಯಕ್ಕೆ ಉತ್ಪಾದನೆಗೆ ಸಹಾಯಕವಾಗುವ ವ್ಯವಸ್ಥೆಗಳು ಜಾರಿಯಾಗಬೇಕು. ಯಾವುದೇ ತಂತ್ರಜಾನ ಬಂದರೂ ಅದೂ ಪರಿಸರಕ್ಕೆ ಪೂರಕ ಮತ್ತು ಹಸಿರೀಕರಣಕ್ಕೆ ಸಹಾಯಕವಾಗಬೇಕು ಮತ್ತು ಮಾಲಿನ್ಯ ರಹಿತವಾಗಿಬೇಕು. ಇದಕ್ಕೆ ಸರ್ಕಾರ ಪೂರಕವಾಗಿ ಎಲ್ಲ ಸಹಾಯ ಮಾಡುತ್ತದೆ. ಹಸಿರು ಇಂಧನ ಉತ್ಪಾದನೆಗೆ ಸರ್ಕಾರ ಒತ್ತು ನೀಡುತ್ತಿದೆ. ಸರ್ಕಾರ ಮತ್ತು ಖಾಸಗಿ ವಲಯ ಒಟ್ಟಾಗಿ ಹಸರೀಕರಣಕ್ಕೆ ಒತ್ತು ನೀಡಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಐಐಟಿ ನಿರ್ದೇಶಕ ಪ್ರೊ.ವೆಂಕಪ್ಪಯ್ಯ ದೇಸಾಯಿ ಮಾತನಾಡಿ, ಹತ್ತು ಹಲವು ನವೋದ್ಯಮಕ್ಕೆ ಈಗಾಗಲೇ ಸರ್ಕಾರ ಸಹಾಯಕ್ಕೆ ಬಂದಿದೆ. ಇದಕ್ಕೆ ಐಐಟಿ ಧಾರವಾಡ ಕೂಡ ಸಾತ್ ನೀಡಿದ್ದು, ವಿದ್ಯಾಥಿಗಳು ಸಾಕಷ್ಟು ಸಂಶೋಧನಾತ್ಮಕವಾಗಿ ಕೆಲಸ ಮಾಡಬೇಕಾಗಿದೆ. ಸಮಸ್ಯೆಯಿಂದ ಸಮಾಧಾನದ ಕಡೆಗೆ ಸಾಗಬೇಕಿದ್ದು, ಈ ನಿಟ್ಟಿನಲ್ಲಿ ನವೋಧ್ಯಮಕ್ಕೆ ಸರ್ಕಾರದ ಪ್ರೋತ್ಸಾಹ ಮತ್ತು ಸಂಸ್ಥೆಗಳ ಸಹಕಾರ ಅಗತ್ಯವಿದೆ ಎಂದರು.

ಡಾ.ಜೀತೇಂದ್ರ ಕುಮಾರ್, ಈ ದಿನ ಇದೇ ಮೊದಲ ಬಾರಿಗೆ ಬೈರಾಕ್ ಯೋಜನೆಯನ್ನು ಜೈವಿಕ ವಲಯ ಉತ್ತೇಜನಕ್ಕೆ ಬಳಸಿಕೊಂಡಿದ್ದು ಖುಷಿ ತಂದಿದೆ. ಬೆಂಗಳೂರಿನಲ್ಲಿ 2021 ರಲ್ಲಿ ಒಂದು ಕೇಂದ್ರ ತೆರೆಯಲಾಗಿತ್ತು. ಆದರೆ ಇದೀಗ ಧಾರವಾಡದಲ್ಲಿಯೇ ಎಂಪಿ ಲ್ಯಾಡ್ ಯೋಜನೆಯನ್ನು ಧಾರವಾಡದಲ್ಲಿ ಬಳಸಿಕೊಂಡು ಹೊಸತನಕ್ಕೆ ಪ್ರೋತ್ಸಾಹ ನೀಡಿದ್ದು ಖುಷಿ ತಂದಿದೆ ಎಂದರು. ಪ್ರತಿಯೊಂದು ಕೇಂದ್ರದಲ್ಲಿ ಹೊಸ ನವೋದ್ಯಮಗಳು ಬರಬೇಕು. ಆದರೆ ಹುಬ್ಬಳ್ಳಿ ಧಾರವಾಡದಲ್ಲಿ 20 ಕ್ಕೂ ಹೆಚ್ಚು ನವೋದ್ಯಮಗಳು ಆರಂಭಗೊಂಡಿವೆ. ಮೊದಲ ವರ್ಷವೇ ಒಂದೊಂದು ಕಂಪನಿಗಳು 5 ಕೋಟಿ ರೂ.ಗಳಷ್ಟು ವ್ಯವಹಾರ ಮಾಡಿವೆ. ಒಂದೊಂದು ಇನ್ ಕ್ಯೂಬಿಷೇನ್ ಕೇಂದ್ರಗಳಲ್ಲಿ ನೂರಾರು ಕೊಟಿ ರೂ.ಗಳಷ್ಟು ಹಣಕಾಸಿನ ವಹಿವಾಟು ನಡೆಯುವಂತಾಗಿದ್ದು, ಈ ವಿಚಾರವನ್ನು ಮುನ್ನೆಲೆಗೆ ತಂದಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿಚಾರ ಉತ್ತಮವಾಗಿದೆ ಎಂದರು. ನಾವೀಗ 2047 ಕ್ಕೆ ವಿಕಸಿತ ಭಾರತದ ಗುರಿಯನ್ನು ಇಟ್ಟುಕೊಂಡು ಇಂತಹ ಯೋಜನೆಗಳನ್ನು ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಐಐಟಿ ಧಾರವಾಡ ಉತ್ತಮ ಕೊಡುಗೆ ನೀಡಬೇಕು. ಹೊಸ ಸಂಶೋಧನೆಗಳು ಇನ್ನು ಮುಂದಿನ ದಿನಗಳಲ್ಲಿ ಎದುರು ನೊಡಬೇಕಾಗಿದೆ. ನಾವು ವಿಶ್ವದಲ್ಲಿ 4ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ಹರ್ಷದ ಸಂಗತಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net