ಸೈಬರ್ ಅಪರಾಧ ತಡೆಗೆ ಯುವ ಪೊಲೀಸ್ ಅಧಿಕಾರಿಗಳು ಶ್ರಮಿಸಬೇಕು

police flag day
Published on

ಮೈಸೂರು: ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಪತ್ತೆಹಚ್ಚಿ ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿ ಇರಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಪುಟ್ಟಮಾದಯ್ಯ ಹೇಳಿದರು.

ನಗರ ಶಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಪೊಲೀಸ್ ಧ್ವಜದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೇರೆ ಇಲಾಖೆಗಳಿಗಿಂತ ಪೊಲೀಸ್ ಇಲಾಖೆ ಭಿನ್ನ. ಇಲ್ಲಿ ಕೆಲಸಕ್ಕೆ ನಿರ್ದಿಷ್ಟ ಸಮಯ ಇರುವುದಿಲ್ಲ. ಎಲ್ಲ ಸಂದರ್ಭದಲ್ಲೂ ತಯಾರಿರಬೇಕು. ಆರೋಗ್ಯ ಸಮಸ್ಯೆಗಳೂ ಬೇಗ ಬರುತ್ತವೆ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಾರ್ವಜನಿಕ ಜೀವನದಲ್ಲಿ ನಡೆದುಕೊಳ್ಳುವ ರೀತಿ ಮುಖ್ಯ. ಈ ದಿನಗಳಲ್ಲಿ ರಾಜಕೀಯ ಗೊಂದಲ, ಸೈಬರ್ ಅಪರಾಧಗಳನ್ನು ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿ ಇರಬೇಕು. ನಿವೃತ್ತ ಅಧಿಕಾರಿಗಳ ಪಟ್ಟಿ ಠಾಣಾ ಮಟ್ಟದಲ್ಲಿ ನಿರ್ವಹಣೆ ಆಗಬೇಕು. ನಿವೃತ್ತರನ್ನು ಗೌರವಿಸಬೇಕು ಎಂದು ತಿಳಿಸಿದರು.

ಪ್ರಧಾನ ದಳಪತಿ ಸಹಾಯಕ ಕಮಾಂಡರ್ ಎಂ.ರಾಜು ತುಕಡಿಗಳ ಪರಿವೀಕ್ಷಣೆಗೆ ಕರೆದೊಯ್ದರು. ತೆರೆದ ವಾಹನದಲ್ಲಿ ಪರಿವೀಕ್ಷಣೆ ಮಾಡಲಾಯಿತು. ನಗರ, ಜಿಲ್ಲಾ ಶಸಸ್ತ್ರ ಮೀಸಲು ಪಡೆ, ನಗರ ನಾಗರಿಕ ಪೊಲೀಸ್, ಸಂಚಾರ ವಿಭಾಗ, ಅಶ್ವರೋಹಿ ದಳದಿಂದ 10 ತಂಡಗಳಿಂದ ಪಥಸಂಚಲನ ನಡೆಯಿತು.

ಕಾರ್ಯಕ್ರಮದಲ್ಲಿ ದಕ್ಷಿಣ ವಲಯದ ಐ.ಜಿ.ಪಿ ಬೋರಲಿಂಗಯ್ಯ, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ನಗರ ಡಿಸಿಪಿಗಳಾದ ಮುತ್ತುರಾಜ್, ಎಸ್.ಜಾಹ್ನವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಕಮಾಂಡೆಂಟ್ ಶೈಲೇಂದ್ರ, ಕೆಪಿಎ ನಿರ್ದೇಶಕ ಚನ್ನಬಸವಣ್ಣ, ಸೆಸ್ಕ್ ಎಸ್ಪಿ ಸವಿತಾ ಹೂಗಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net