

ಕೊರಟಗೆರೆ : ನಶೆಯಿಂದ ದೂರವಿರುವುದು ದೇಹದ ಶುದ್ಧತೆಗೆ ಮಾತ್ರವಲ್ಲ, ಆತ್ಮದ ಶುದ್ಧತೆಗೂ ಮಾರ್ಗವಾಗಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಜನತಾ ಶಿಕ್ಷಣ ಸಂಸ್ಥೆ, ಬೆಂಗಳೂರಿನ ವಿವೇಕಾನಂದ ಮಹಿಳಾ ಪದವಿ ಪೂರ್ವ ಕಾಲೇಜು ವತಿಯಿಂದ ನಶೆ ಮುಕ್ತ ಭಾರತ ಅಭಿಯಾನ ಎಂಬ 7 ದಿನಗಳ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ನಶೆ ಎಂದರೆ ಕೇವಲ ಮದ್ಯ ಅಥವಾ ಮಾದಕ ದ್ರವ್ಯವಲ್ಲ, ಅದು ಮನಸ್ಸಿನ ಅಸಮತೋಲನದ ರೂಪ. ನಶೆಯಿಂದ ದೂರವಿರುವುದು ದೇಹದ ಶುದ್ಧತೆ ಜತೆಗೆ ಆತ್ಮದ ಶುದ್ಧತೆಗೂ ಮಾರ್ಗವಾಗಿದ್ದು, ಯುವಜನತೆ ಆತ್ಮಶಕ್ತಿ, ಸಂಸ್ಕಾರ, ಮತ್ತು ಸೇವಾ ಮನೋಭಾವವನ್ನು ಜೀವನದ ಕೇಂದ್ರೀಯ ಮೌಲ್ಯಗಳಾಗಿಸಿಕೊಳ್ಳಬೇಕು. ನಶೆಯಿಂದ ಮುಕ್ತಿ ಪಡೆಯುವುದರಿಂದ ವ್ಯಕ್ತಿಯಷ್ಟೇ ಅಲ್ಲ, ಸಮಾಜದ ಪುನರುತ್ಥಾನವೂ ಆಗುತ್ತದೆ ಎಂದು ಸಂದೇಶ ನೀಡಿದರು.
ಆಧುನಿಕತೆ ಮತ್ತು ತೋರಿಕೆಯ ಮನೋಭಾವದಿಂದ ಯುವಜನತೆ ದಾರಿ ತಪ್ಪುತ್ತಿದ್ದು, ಇದು ನಿಲ್ಲಬೇಕು. ನಮ್ಮ ಬದುಕು ಹೇಗಿರಬೇಕು, ನಮ್ಮಿಂದ ಸಮಾಜ ಮತ್ತು ಕುಟುಂಬ ಯಾವುದನ್ನು ನಿರೀಕ್ಷಿಸುತ್ತಿದ್ದಾರೆ ಎನ್ನುವುದನ್ನು ತಿಳಿಯಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಭಾರತ ನಶೆಮುಕ್ತವಾಗಬೇಕಾದರೆ ಮೊದಲು ಕುಟುಂಬದಿಂದಲೇ ಪ್ರಾರಂಭವಾಗಬೇಕು. ಪಾಲಕರು, ಶಿಕ್ಷಕರು ಮತ್ತು ಸಮಾಜದ ಹಿರಿಯರು ಯುವ ಪೀಳಿಗೆಗೆ ಮಾದರಿಯಾಗಬೇಕು. ಎನ್ಎಸ್ಎಸ್ ಶಿಬಿರಗಳು ಯುವಜನತೆಗೆ ಶಿಸ್ತಿನ ಜೀವನ, ಶ್ರಮದ ಮೌಲ್ಯ ಮತ್ತು ಜವಾಬ್ದಾರಿಯ ಮನೋಭಾವ ಬೆಳೆಸುವ ಶಾಲೆಗಳಂತಾಗಬೇಕು. ಸರ್ಕಾರದಿಂದಲೂ ನಶಾಮುಕ್ತ ಗ್ರಾಮಗಳ ನಿಮಾರ್ಣಕ್ಕೆ ಯೋಜನೆಗಳಿದ್ದು, ಅದರ ಯಶಸ್ಸು ಯುವಕರ ಕೈಯಲ್ಲಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ನಂಜುಂಡಯ್ಯ ಮಾತನಾಡಿ, ಶಿಕ್ಷಣವು ಕೇವಲ ಪರೀಕ್ಷಾ ಅಂಕಗಳಿಗೆ ಸೀಮಿತ ಆಗಬಾರದು. ಅದು ಜೀವನ ಮಾರ್ಗದರ್ಶಕವಾಗಬೇಕು. ನಶೆಯಿಂದ ದೂರವಿದ್ದು, ಸೇವೆಯಲ್ಲಿ ತೊಡಗಿದರೆ ಜೀವನ ಸಂತೋಷಕರವಾಗುತ್ತದೆ ಎಂದರು.
ಮಾಜಿ ಜಿಪಂ ಸದಸ್ಯ ಜಿ.ಆರ್.ಶಿವರಾಮಯ್ಯ, ವಿವೇಕಾನಂದ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ತ್ರಿವೇಣಿ, ಶಿಬಿರಾಧಿಕಾರಿಗಳಾದ ಎಂ.ಸವಿತಾ, ಪೂರ್ಣೆಮಾ, ತಳವಗೇರಿ, ಜ್ಞಾನೇಶ್ವರಿ ಮತ್ತಿತರರು ಇದ್ದರು.