

ಕಾಗವಾಡ: ವಿದ್ಯಾರ್ಥಿಗಳು ಮಾದಕ ವಸ್ತುಗಳತ್ತ ಆಕರ್ಷಿತರಾಗಿ ತಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ತಮ್ಮ ಆರೋಗ್ಯದ ಜತೆಗೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವುದು ಕಳವಳಕಾರಿ ಸಂಗತಿ ಎಂದು ಪಿಎಸ್‌ಐ ಎಂ.ಬಿ. ಬಿರಾದಾರ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಎನ್‌ಎಸ್‌ಎಸ್, ಯೂತ್ ರೆಡ್-ಕ್ರಾಸ್, ಆ್ಯಂಟಿ ರ‌್ಯಾಗಿಂಗ್ ಕೋಶ ಹಾಗೂ ಕಾಗವಾಡ ಪೋಲಿಸ್ ಇಲಾಖೆಯ ಸಂಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಎ. ಕರ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಬೇಕು. ಪ್ರಸ್ತುತ ದಿನಮಾನಗಳನ್ನು ಅವಲೋಕಿಸಿದರೆ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದರು.
ಪ್ರೊ.ಅಶೋಕ ಪಾಟೀಲ, ಡಾ.ಎ.ಟಿ. ಪಾಟೀಲ, ಪ್ರೊ. ಎಸ್.ಎಂ. ಘೋರ್ಪಡೆ ಇತರರು ಇದ್ದರು. ಅಶ್ವಿನಿ ಮಾಕಣ್ಣವರ ಪ್ರಾರ್ಥಿಸಿದರು. ಡಾ.ಚಂದ್ರಶೇಖರ ವೈ. ಸ್ವಾಗತಿಸಿದರು. ಡಾ.ಎ.ಎಂ. ಜಕ್ಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಸ್.ಎಸ್. ಮೋರೆ ವಂದಿಸಿದರು.