ಯುವಜನರು ದೇಶದ ಇತಿಹಾಸ ತಿಳಿದುಕೊಳ್ಳಬೇಕು

nrp anci
ಎನ್.ಆರ್.ಪುರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಧನಂಜಯ ಮೇಧೂರ, ಬಿ.ಕೆ.ರಂಗಪ್ಪ, ಟಿ.ವಿಜಯಕುಮಾರ್, ರಾಘವೇಂದ್ರ, ಶ್ರೀಕಾಂತ್, ವಿಶ್ವನಾಥ ಇದ್ದರು.
Published on

ಎನ್.ಆರ್.ಪುರ: ಜಾಗತೀಕರಣ ಭರಾಟೆಯಲ್ಲಿ ಮುಂದೆ ಸಾಗುತ್ತಿರುವ ಯುವ ಜನರು ಪಾರಂಪರಿಕ, ಐತಿಹಾಸಿಕ ಕಟ್ಟಡ, ಸ್ಮಾರಕಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಧನಂಜಯ ಮೇಧೂರ ಹೇಳಿದರು.

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕಿನ ಪ್ರೌಢಶಾಲೆಗಳ ಮಕ್ಕಳಿಗೆ ಆಯೋಜಿಸಿದ್ದ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ದೇಶದ ಪಾರಂಪರಿಕ ಜಾನಪದ ಸ್ಮಾರಕಗಳು, ಐತಿಹಾಸಿಕ ಕಟ್ಟಡಗಳ ಪರಿಚಯವಾಗಲಿದೆ. ಮಕ್ಕಳು ಆಧುನಿಕ ಬದುಕಿಗೆ ಮಾತ್ರ ಒತ್ತು ನೀಡದೆ ಪೂರ್ವಿಕರ ಜೀವನ ತಿಳಿದುಕೊಳ್ಳಬೇಕು ಎಂದರು.
ಹರಪ್ಪ ನಾಗರಿಕತೆಯಿಂದ ಇಂದಿನವರೆಗೆ ಭಾರತದಲ್ಲಿ ಆದ ಬದಲಾವಣೆ, ಕಟ್ಟಡದ ವಿಶೇಷ, ಪಾರಂಪರಿಕ ಸ್ಥಳಗಳ ಪರಿಚಯ ತಿಳಿದುಕೊಂಡರೆ ಬದುಕಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಶಿಕ್ಷಣ ಸಂಯೋಜಕ ಬಿ.ಕೆ.ರಂಗಪ್ಪ ಮಾತನಾಡಿ, 2014ರಲ್ಲಿ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮ ಪ್ರಾರಂಭವಾಗಿದೆ. ಪುರಾತನ ದೇವಸ್ಥಾನ, ಪ್ರಾಚೀನ ವಸ್ತುಗಳು, ಐತಿಹಾಸಿಕ ಕಟ್ಟಡಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದೇ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದ ಮುಖ್ಯ ಉದ್ದೇಶ. ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲೆ, ಭಾಷಣ, ರಸ ಪ್ರಶ್ನೆ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಗುತ್ತದೆ. ತಾಲೂಕು ಮಟ್ಟದಲ್ಲಿ ಗೆದ್ದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ತಾಲೂಕಿನ 14 ಪ್ರೌಢಶಾಲೆ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ನಡೆಯಿತು. ವಿಜೇತ ಮಕ್ಕಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು. ಬಿಐಇಆರ್ ಟಿ.ವಿಜಯಕುಮಾರ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ, ಶಿಕ್ಷಣ ಸಂಯೋಜಕಿ ಸಂಗೀತಾ, ಜ್ಞಾನ ಗಂಗೋತ್ರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶ್ರೀಕಾಂತ್, ಕಿತ್ತೂರು ರಾಣಿ ವಸತಿ ಶಾಲೆ ಪ್ರಭಾರ ಪ್ರಾಚಾರ್ಯ ವಿಶ್ವನಾಥ, ಎಚ್.ಎಸ್.ನಾಗರಾಜ್, ವೀರೇಶ್, ಭಾಗ್ಯಾ, ಸುಹಾಸಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net