

ಜಮಖಂಡಿ: ಗೊತ್ತು ಗುರಿಯಿಲ್ಲದ ಇಂದಿನ ಯುವಕರು ಅಪಾಯಕಾರಿ ಮಾರ್ಗದಲ್ಲಿ ಸಾಗುತ್ತಿದ್ದು, ತಂದೆ-ತಾಯಿಗಳ ಅಂತ್ಯಕಾಲದಲ್ಲಿ ವೈದ್ಯರನ್ನು ಮನೆಗೆ ಕರೆತರುವ ಬದಲಾಗಿ ವಕೀಲರನ್ನು ಕರೆತರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಥಣಿಯ ಗಚ್ಚಿನಮಠದ ಶಿವಬಸವ ಮಹಾಸ್ವಾಮಿಗಳು ವಿಷಾದಿಸಿದರು.
ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.29 ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆ ಅಂಗವಾಗಿ 8ನೇ ದಿನವಾದ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಆಹಾರ, ವಿಹಾರ, ವಿಚಾರ ಕ್ರಮಬದ್ಧವಾಗಿದ್ದರೆ ಆರೋಗ್ಯವಂತರೂ ಆಗಿರುತ್ತಾರೆ. ಸಾಧಕರೂ ಆಗುತ್ತಾರೆ. ಅನರ್ಘ್ಯರತ್ನವೆನಿಸಿರುವ ವಚನಗಳನ್ನು ಮಕ್ಕಳಿಗೆ ಕಲಿಸಿದರೆ ಭಾರತಕ್ಕೆ ಭವಿಷ್ಯವಿದೆ. ಬಸವಾದಿ ಶಿವಶರಣರ ಸುಂದರ ಬದುಕಿನ ಸಪ್ತಸೂತ್ರಗಳನ್ನು ಮಕ್ಕಳಿಗೆ ಕಲಿಸಿಕೊಡಬೇಕು ಎಂದರು.
ತಹಸೀಲ್ದಾರ್ ಸದಾಶಿವ ಮಕ್ಕೋಜಿ ಮಾತನಾಡಿ, ಮಕ್ಕಳಲ್ಲಿ ಒಳ್ಳೆಯ ಚಿಂತನೆ ಹಾಗೂ ಉತ್ತಮ ಸಂಸ್ಕಾರ ತುಂಬುವ ಅಧ್ಯಾತ್ಮದ ಅವಶ್ಯಕತೆಯಿದೆ. ತಂದೆ-ತಾಯಿಗಳಿಗೆ, ಹಿರಿಯರಿಗೆ, ಕಲಿಸುವ ಶಿಕ್ಷಕರಿಗೆ ಗೌರವ ಕೊಡುವ ಮಕ್ಕಳನ್ನು ರೂಪಿಸುವ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದರು.
ಡಾ.ವಿಜಯಲಕ್ಷ್ಮೀ ತುಂಗಳ ಮಾತನಾಡಿ, ಧಾರಾವಾಹಿಗಳು ಕುಟುಂಬಗಳನ್ನು ಕೆಡಿಸುತ್ತಿವೆ. ನಮ್ಮತನವನ್ನು ಕಳೆಯುತ್ತಿವೆ. ಮಹಿಳೆಯರು ಧಾರಾವಾಹಿಗಳಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.
ಝುಂಜರವಾಡದ ಬಸವರಾಜೇಂದ್ರ ಶರಣರು ಪ್ರವಚನ ನೀಡಿದದರು. ಹೂವಿನ ಹಿಪ್ಪರಗಿಯ ವಿಶ್ವನಾಥ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಪ್ರೌಢಶಾಲೆ ಸಹಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಕಲ್ಲೋಳ್ಳಿ, ರಾಜೇಂದ್ರ ಹುಲ್ಯಾಳಕರ, ಉಮೇಶ ದೇಸಾಯಿ, ವಕೀಲ ವಿ.ವಿ. ತುಳಸಿಗೇರಿ, ಅರ್ಬನ್ ಬ್ಯಾಂಕ್ ನಿರ್ದೇಶಕ ಅಪ್ಪಾಸಾಬ ಮನಗೂಳಿ, ನಗರಸಭೆ ಸದಸ್ಯರಾದ ದಾನೇಶ ಘಾಟಗೆ, ಪುತಳಾಬಾಯಿ ಚೌಧರಿ, ಹೇಮರಡ್ಡಿ ಮಹಿಳಾ ಮಂಡಳ ಅಧ್ಯಕ್ಷೆ ಜ್ಯೋತಿ ಪಾಟೀಲ, ಉಪಾಧ್ಯಕ್ಷೆ ಉಮಾ ಚಿತ್ತರಗಿ ಇದ್ದರು.
ನೀತಾ ಕುಲಕರ್ಣಿ ಪ್ರಾರ್ಥಿಸಿದರು. ನಿಖಿತಾ ಹಿರೇಮಠ, ಕೀರ್ತಿ ಮಠ ಭರತನಾಟ್ಯ ಪ್ರದರ್ಶಿಸಿದರು. ಶಂಕರ ಲಮಾಣಿ ಸ್ವಾಗತಿಸಿದರು. ಶಿವಲೀಲಾ ಲಿಗಾಡಿ ನಿರೂಪಿಸಿದರು. ಓಲೇಮಠದ ಆನಂದ ದೇವರು ಶ್ರೀಗಳು ಶರಣು ಸಮರ್ಪಿಸಿದರು.