ಯುವಜನತೆ ಚರಿತ್ರೆ ಅರಿಯಲಿ

1 vikram 3
Published on

ಧಾರವಾಡ: ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊರೆತ ಪ್ರಾಮುಖ್ಯತೆಯಂತೆ ಕರ್ನಾಟಕ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದೊಂದಿಗೆ ಕರ್ನಾಟಕ ಏಕೀಕರಣಕ್ಕೆ ನಡೆದ ಚಳವಳಿಯೂ ಮಹತ್ವ ಪಡೆದಿದೆ. ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು ಬ್ರಿಟಿಷರ ಆಡಳಿತದ ನಂತರ ಮತ್ತೆ ಒಂದಾಗಿದ್ದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ಕರ್ನಾಟಕ ಏಕೀಕರಣದ ಚಳವಳಿ ಧಾರವಾಡದ ನೆಲದಲ್ಲಿ ಜನ್ಮ ತಾಳಿದ್ದು ಅಭಿಮಾನದ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

65ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನರೇಂದ್ರ ಗ್ರಾಮದ ರಾ.ಹ. ದೇಶಪಾಂಡೆ ಅವರು 1887ರಿಂದಲೇ ಕನ್ನಡ ಭಾಷೆಯ ದೀನ ಸ್ಥಿತಿ ದೂರ ಮಾಡಲು ಕನ್ನಡಿಗರ ಸಹಾಯದಿಂದ ಸಂಘ ಸ್ಥಾಪಿಸಲು ಪ್ರಯತ್ನಿಸುತ್ತಿದ್ದರು. ಅದರ ಫಲವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದರು. ಕನ್ನಡಿಗರನ್ನು ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಒಂದುಗೂಡಿಸಲು ಧಾರವಾಡದಲ್ಲಿ ನಡೆದ ಚಳವಳಿ, ಹೋರಾಟಗಳು ಇಡೀ ರಾಜ್ಯಕ್ಕೆ ದಿಕ್ಸೂಚಿಯಾಗಿದ್ದವು. ಡೆಪ್ಯೂಟಿ ಚನ್ನಬಸಪ್ಪನವರು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಕರ್ನಾಟಕ ಏಕೀಕರಣಕ್ಕೆ ಒತ್ತಾಯಿಸಿ ಅದರಗುಂಚಿ ಶಂಕರಗೌಡ ಪಾಟೀಲರು ಉಪವಾಸ ಸತ್ಯಾಗ್ರಹ ನಡೆಸಿದ್ದರು. ನಂತರ ಸುದೀರ್ಘ ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಅಖಂಡವಾಗಿ ಮೈಸೂರು ರಾಜ್ಯದಲ್ಲಿ ಒಂದುಗೂಡಿದವು. ನಂತರ ಅದು ಕರ್ನಾಟಕ ಎಂದು ಮರುನಾಮಕರಣಗೊಂಡಿತು ಎಂದರು.

ಕರ್ನಾಟಕ ರಾಜ್ಯೋತ್ಸವದ ಹಿಂದೆ ನಾಡಿನ ಏಕೀಕರಣಕ್ಕೆ ಶ್ರಮಿಸಿದ ಮಹನೀಯರ ಹೋರಾಟವಿದೆ. ಈ ಹೋರಾಟದಲ್ಲಿ ತೊಡಗಿದ್ದ ರಾ.ಹ.ದೇಶಪಾಂಡೆ, ಸರ್.ಸಿದ್ಧಪ್ಪ ಕಂಬಳಿ, ಬಿ. ಬಸವಲಿಂಗಪ್ಪ, ಹಳ್ಳಿಕೇರಿ ಗುದ್ಲೆಪ್ಪನವರು, ಆಲೂರು ವೆಂಕಟರಾಯರು, ಡಿ.ಪಿ.ಕರಮಕರ್, ರಂಗನಾಥ ದಿವಾಕರ್, ಮೊಹರೆ ಹಣಮಂತರಾಯರು, ಟಿ.ಆರ್.ನೇಸ್ವಿ, ಶ್ರೀರಂಗರು, ಹೊಸಮನಿ ಸಿದ್ದಪ್ಪ, ವೀರನಗೌಡ ಪಾಟೀಲ, ಕೆ.ಎಫ್. ಪಾಟೀಲ ಸೇರಿ ಇತರ ಮಹಾನ್ ವ್ಯಕ್ತಿಗಳ ನೇತೃತ್ವದಲ್ಲಿ ಸಹಸ್ರಾರು ಜನ ಕನ್ನಡಿಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗೆ ಹಗಲಿರುಳು ದುಡಿದಿದ್ದಾರೆ. ಅಖಂಡ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಯುವ ಪೀಳಿಗೆ ಪಾಲುದಾರರಾಗಬೇಕು. ತಮ್ಮ ಅಧ್ಯಯನ, ವ್ಯಾಸಂಗದ ಜತೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಬಗೆಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ನಮ್ಮ ಪರಂಪರೆಯ ವಾರಸುದಾರರಾಗಿ ಕನ್ನಡತನ, ಕನ್ನಡತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಪೂರ್ವದಲ್ಲಿ ನಗರದಲ್ಲಿನ ಪ್ರೊ. ಕೆ.ಜಿ. ಕುಂದಣಗಾರ, ಡೆಪ್ಯೂಟಿ ಚನ್ನಬಸಪ್ಪ ಪ್ರತಿಮೆಗಳಿಗೆ ಹಾಗೂ ಕಾರ್ಗಿಲ್ ಸ್ತೂಪಕ್ಕೆ ಸಚಿವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಪರೇಡ್ ಕಮಾಂಡರ್ ಜಿ.ಸಿ. ಡೂಗನವರ ಹಾಗೂ ಬಿ.ಆರ್.ಚೆನ್ನೆಮ್ಮನವರ ನೇತೃತ್ವದಲ್ಲಿ ವಿವಿಧ ದಳಗಳಿಂದ ಮುಖ್ಯ ಅತಿಥಿಗಳಿಗೆ ಗೌರವ ರಕ್ಷೆ ನೀಡಲಾಯಿತು.

ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಲಾಬೂರಾಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಜಿಪಂ ಸಿಇಒ ಡಾ. ಸುಶೀಲಾ ಬಿ., ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ಪೊಲೀಸ್ ಆಯುಕ್ತ ಆರ್.ಬಿ ಬಸರಗಿ, ಡಿವೈಎಸ್​ಪಿ ಶಿವಾನಂದ ಜಿ.ಸಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಆರ್. ಪುರುಷೊತ್ತಮ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ, ಡಿಡಿಪಿಐ ಎಂ.ಎಲ್. ಹಂಚಾಟೆ, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಇದ್ದರು.

ಸಮಯಕ್ಕೆ ಕಾದು ಕುಳಿತ ಸಚಿವರು

ರಾಜ್ಯೋತ್ಸವ ನಿಮಿತ್ತ ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ಸಮಯ ನಿಗದಿ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ 10 ನಿಮಿಷ ಮುಂಚೆ ಆಗಮಿಸಿದ್ದ ಸಚಿವ ಜಗದೀಶ ಶೆಟ್ಟರ್ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ನಿಗದಿತ ಸಮಯಕ್ಕೆ ಕಾದು ಕುಳಿತುಕೊಳ್ಳುವಂತಾಗಿತ್ತು. ಆದರೆ ಕಾರ್ಯಕ್ರಮ ನಿರೂಪಕರು 8 ನಿಮಿಷ ಮೊದಲೇ ಸಚಿವರನ್ನು ಆಹ್ವಾನಿಸಿದ್ದಲ್ಲದೆ, ಸಾರ್ವಜನಿಕರಿಗೂ ಎದ್ದು ನಿಲ್ಲುವಂತೆ ಸೂಚಿಸಿದ್ದರು. ಸಚಿವರು ಮಾತ್ರ ಸಮಯವಾಗದ ಹಿನ್ನೆಲೆ ಧ್ವಜಾರೋಹಣಕ್ಕೆ ನಿರಾಕರಿಸಿದ್ದರಿಂದ ಕೆಲ ಹೊತ್ತು ಸಾರ್ವಜನಿಕರು ಎದ್ದು ನಿಲ್ಲುವಂತಾಗಿತ್ತು. ಬಳಿಕ ನಿರೂಪಕರ ಸೂಚನೆ ಮೇರೆಗೆ ಸಾರ್ವಜನಿಕರು ಆಸೀನರಾದರು.

============

ಫೋಟೊ--ಎಚ್1-ಕರ್ನಾಟಕ ರಾಜ್ಯೋತ್ಸವ 2

ಕರ್ನಾಟಕ ಸಂಗ್ರಾಮ ಸೇನೆ, ಹುಬ್ಬಳ್ಳಿ, 100 ಮೀ. ಉದ್ದ, ಕನ್ನಡ ಧ್ವಜದ ಮೆರವಣಿಗೆ,

ಗಮನ ಸೆಳೆದ 100 ಮೀ. ಕನ್ನಡ ಧ್ವಜ

ಹುಬ್ಬಳ್ಳಿ: ರಾಜ್ಯೋತ್ಸವ ನಿಮಿತ್ತ ಕರ್ನಾಟಕ ಸಂಗ್ರಾಮ ಸೇನೆ ಕಾರ್ಯಕರ್ತರು ಭಾನುವಾರ ಹುಬ್ಬಳ್ಳಿಯಲ್ಲಿ 100 ಮೀ. ಉದ್ದದ ಕೆಂಪು-ಹಳದಿ ವರ್ಣದ ಕನ್ನಡ ಧ್ವಜದ ಮೆರವಣಿಗೆ ನಡೆಸಿ ಗಮನ ಸೆಳೆದರು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಧ್ವಜದ ಮೆರವಣಿಗೆ ನಡೆಸಲಾಯಿತು. ಕಾರ್ಯಕರ್ತರು ಧ್ವಜವನ್ನು ಮೇಲಕ್ಕೆ ಎತ್ತಿ ಹಿಡಿದಿದ್ದರು. ಸಾರ್ವಜನಿಕರು ಸಹ ಕೈ ಜೋಡಿಸಿದರು.

ಇದಕ್ಕೂ ಪೂರ್ವ ಪೊಲೀಸರಿಗೆ, ಕನ್ನಡಾಭಿಮಾನಿಗಳಿಗೆ ಕನ್ನಡ ರಕ್ಷೆಯ ಕಂಕಣ ಕಟ್ಟಲಾಯಿತು. ಸೇನೆ ಅಧ್ಯಕ್ಷ ಸಂಜೀವ ದುಮಕನಾಳ, ಸಾತಪ್ ಕುಂಕೂರ, ನಿಂಗಪ್ಪ ಕುರಬರ, ರಮಜಾನ್ ಕಲಂದರ, ಇತರರು ಇದ್ದರು.

ತಾಯಿ ಭುವನೇಶ್ವರಿಗೆ ಪೂಜೆ

ಹುಬ್ಬಳ್ಳಿ ಆಟೋ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ನೇತೃತ್ವದಲ್ಲಿ ನಗರದ ಕಿತ್ತೂರು ಚನ್ನಮ್ಮ ವೃತ್ತದ ಬಳಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಆಟೋ ರಿಕ್ಷಾಗೆ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರ ಅಳವಡಿಸಿ ಹೂ ಮಾಲೆ ಹಾಕಲಾಗಿತ್ತು. ಕನ್ನಡ ಧ್ವಜ ರಾರಾಜಿಸುತ್ತಿತ್ತು. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕನ್ನಡಾಂಬೆ ಭಾವಚಿತ್ರ ಹೊತ್ತು ಆಟೋ ರಿಕ್ಷಾ ಮೆರವಣಿಗೆ ರದ್ದು ಪಡಿಸಿ ಸರಳವಾಗಿ ರಾಜ್ಯೋತ್ಸವ ಆಚರಿಸಲಾಗಿದೆ. ರಫೀಕ್ ಕುಂದಗೋಳ, ಮಹಾವೀರ ಬಿಲಾನಾ, ದುರ್ಗಪ್ಪ ಪೂಜಾರ, ಹನುಮಂತ ಮುಳಗುಂದ, ಜಾಫರ ಕೆರೂರ, ಇತರರು ಇದ್ದರು.

---

ಫೋಟೊ ಶೀರ್ಷಿಕೆ

ಎಚ್1-ಗೋ ಗ್ರೀನ್ 1

ರಾಜ್ಯೋತ್ಸವ, ಗ್ರೋ ಗ್ರೀನ್ ಪೆಡಲ್ಲರ್ಸ್, ಹುಬ್ಬಳ್ಳಿ, ಸಸಿ ನೀಡಿ ಗೌರವ

ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸಸಿ ನೀಡಿ ಗೌರವ

ಹುಬ್ಬಳ್ಳಿ; ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಅಶೋಕ ಶೆಟ್ಟರ್ ಹಾಗೂ ಕುಂಚ ಕಲಾವಿದ ಎಂ.ಜಿ. ವಾಚೇದಮಠ ಅವರಿಗೆ ರಾಜ್ಯೋತ್ಸವ ನಿಮಿತ್ತ ಗ್ರೋ ಗ್ರೀನ್ ಪೆಡ್ಲರ್ಸ್ ವತಿಯಿಂದ ಸಸಿ ನೀಡಿ ಗೌರವಿಸಲಾಯಿತು.

ಭಾನುವಾರ ಬೆಳಗ್ಗೆ ವಿದ್ಯಾನಗರದ ಪಾಲಿಕೆ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಶೋಕ ಶೆಟ್ಟರ್ ಮಾತನಾಡಿ, ಯುವಕರನ್ನು ಪ್ರೋತ್ಸಾಹಿಸುವ ಕೆಲಸವನ್ನು ಗ್ರೋ ಗ್ರೀನ್ ಪೆಡ್ಲರ್ಸ್ ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಇಂಥ ಕಾರ್ಯಕ್ರಮದಲ್ಲಿ ನಾವೆಲ್ಲ ಭಾಗಿಯಾಗಬೇಕು ಎಂದರು.

ಎಂ.ಜಿ. ವಾಚೇದಮಠ ಮಾತನಾಡಿ, ತಮ್ಮೆಲ್ಲರ ಆಶೀರ್ವಾದದಿಂದ ಪ್ರಶಸ್ತಿ ಬಂದಿದೆ. ನಾನು ನೆಪ ಮಾತ್ರ ಎಂದರು.

ಕರೊನಾ ಸೇನಾನಿಗಳಾದ ಪೊಲೀಸ್ ಸಿಬ್ಬಂದಿಗೆ ಕನ್ನಡ ಪುಸ್ತಕ ಹಾಗೂ ಸಸಿ ನೀಡಿ ಗೌರವಿಸಲಾಯಿತು.

ಪೆಡ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ, ವಿದ್ಯಾನಗರ ಠಾಣೆ ಪೊಲೀಸ್ ಇನ್​ಸ್ಪೆಕ್ಟರ್ ಆನಂದ ಒನಕುದುರೆ, ಶಿವಾನಂದ ಬನ್ನಿಕೊಪ್ಪ, ನಬಿ ನಾಯಕವಾಡಿ, ಚಂದ್ರಶೇಖರ ಏರಿಮನಿ, ಚನ್ನು ದೇವಕ್ಕಿ, ಪ್ರವೀಣ ಪಾಟೀಲ, ರಾಜು ರಾಜೋಳಿ, ಕೃತಿಕ ಕಠಿಗಾರ, ಕಿರಣ ಶೆಟ್ಟಿ, ಅಭಿಷೇಕ ಹೂಲಿ, ಕೃಷ್ಣ ತಂಬೂರ, ವೃಷಭ ಡಂಗನವರ, ಆಯುಷ್ ಇತರರು ಇದ್ದರು.

10 ಸಿಸಿ ಕ್ಯಾಮರಾ ನಿರ್ವಹಣೆ ನಮ್ಮದು

ನಗರದ ವಿವಿಧೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ನಿರ್ವಹಣೆ ಅಸಾಧ್ಯವಾಗಿದೆ ಎಂದು ಇನ್​ಸ್ಪೆಕ್ಟರ್ ಆನಂದ ಒನಕುದುರೆ ಸಭೆಯಲ್ಲಿ ತಿಳಿಸಿದರು. ನಗರ ಪ್ರವೇಶಿಸುವ ಕಡೆ ಅಳವಡಿಸಿರುವ 10 ಸಿಸಿ ಕ್ಯಾಮರಾಗಳ ನಿರ್ವಹಣೆಯನ್ನು ನಮಗೆ ವಹಿಸಿಕೊಡಿ, ನಿಭಾಯಿಸುವ ಮೂಲಕ ನಿಮ್ಮ ಕೆಲಸಕ್ಕೆ ಸಹಕರಿಸುತ್ತೇವೆ ಎಂದು ಎಂದು ಅಶೋಕ ಶೆಟ್ಟರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net