ಯುವಜನರು ದಾರಿ ತಪ್ಪುತ್ತಿದ್ದಾರೆ

vv
ಕನ್ನಡ ವಿಶ್ವವಿದ್ಯಾಲಯಲ್ಲಿ ರ‌್ಯಾಗಿಂಗ್ ತಡೆ ಘಟಕ ಹಮ್ಮಿಕೊಂಡಿದ್ದ ರ‌್ಯಾಗಿಂಗ್ ತಡೆ ದಿನಾಚರಣೆಯನ್ನು ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಎಲ್.ಜನಾರ್ದನ ಉದ್ಘಾಟಿಸಿದರು. ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ರ‌್ಯಾಗಿಂಗ್ ತಡೆ ಘಟಕದ ನೋಡಲ್ ಅಧಿಕಾರಿ ಡಾ.ಜನಾರ್ದನ, ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಇದ್ದರು.
Published on

ಹೊಸಪೇಟೆ: ರ‌್ಯಾಗಿಂಗ್ ನೆಪದಲ್ಲಿ ಮಾನಸಿಕ, ದೈಹಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿರುವುದು ಸಮಾಜದ ಬಹುದೊಡ್ಡ ಪಿಡುಗಾಗಿ ಪರಿಣಮಿಸುತ್ತಿದೆ. ಇದನ್ನು ಆರಂಭದಲ್ಲೇ ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ಮಾರಕವಾಗಬಹುದು ಎಂದು ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಎಲ್.ಜನಾರ್ದನ ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ರ‌್ಯಾಗಿಂಗ್ ತಡೆ ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ರ‌್ಯಾಗಿಂಗ್ ತಡೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವೈದ್ಯಕೀಯ ಮತ್ತು ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ರ‌್ಯಾಗಿಂಗ್ ಹೆಚ್ಚಾಗಿ ಕಂಡು ಬರುತ್ತದೆ. ಇತ್ತೀಚೆಗೆ ಜಾತಿ, ಧರ್ಮ, ವರ್ಣ ಆಧಾರದ ಮೇಲೆ ರ‌್ಯಾಗಿಂಗ್ ಮಾಡುವ ಪ್ರವೃತ್ತಿ ಬೆಳೆದಿದೆ. ಇದು ಭಾರತೀಯರ ಸಂಸ್ಕೃತಿ ಅಲ್ಲ. ಇದರಿಂದ ಅನೇಕ ವಿದ್ಯಾರ್ಥಿಗಳು ನೊಂದು ಕಾಲೇಜು ಬಿಡುವ ಪ್ರಸಂಗಗಳು ನಡೆಯುತ್ತಿವೆ. ಯುವಜನರನ್ನು ತಪ್ಪು ದಾರಿಗೆ ಎಳೆಯುವುದು ರ‌್ಯಾಗಿಂಗ್‌ನ ಇನ್ನೊಂದು ಮುಖವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶೈಕ್ಷಣಿಕ ಮಟ್ಟದಲ್ಲಿಯೇ ತಡೆಯಲು ಯುಜಿಸಿ, ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಎಲ್ಲ ವಿದ್ಯಾರ್ಥಿಗಳು ಪಾಲಿಸುವುದು ಕಡ್ಡಾಯ. ವಿಶ್ವವಿದ್ಯಾಲಯಗಳಲ್ಲಿ ರ‌್ಯಾಗಿಂಗ್ ತಡೆ ಘಟಕ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಈ ಕುರಿತು ತಿಳಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭವಿಷ್ಯ ಹಾಳು

ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ವಿದ್ಯೆ ಮೂಲಕ ವಿದ್ಯಾರ್ಥಿಗಳು ಬದುಕನ್ನು ರೂಪಿಸಿಕೊಳ್ಳುವ ಬದಲಿಗೆ ರ‌್ಯಾಗಿಂಗ್‌ಗೆ ಬಲಿಯಾಗಿ ಭವಿಷ್ಯ ಹಾಳು ಮಾಡಿಕೊಳ್ಳಬಾರದು. ರ‌್ಯಾಗಿಂಗ್‌ನಿಂದ ನೊಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಘಟನೆಗಳು ನಮ್ಮ ಕಣ್ಮುಂದಿವೆ. ಪರಸ್ಪರ ಸ್ನೇಹ ಮನೋಭಾವದಿಂದ ಕಷ್ಟಸುಖಗಳಲ್ಲಿ ಭಾಗಿಯಾಗಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು. ರ‌್ಯಾಗಿಂಗ್ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿದ್ದು, ಎಲ್ಲರೂ ಜವಾಬ್ದಾರಿ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net